ವರದಿ: ಸ್ಟೀಫನ್ ಜೇಮ್ಸ್
ಧಾರವಾಡ: ರಾಜ್ಯ ಸರ್ಕಾರ ಜಾತಿ ಗಣತಿಯಲ್ಲಿ 47 ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ನಮೂದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಾಗಿದೆ.
ಶಿವಪ್ಪ ಚಲವಾದಿ, ನಾಗರಾಜ್ ಬೆಡಸೂರ ಮತ್ತು ಸುರೇಶ ನಾಡಿಗೇರ ಎಂಬುವವರು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ. ಸರ್ಕಾರ ಎಲ್ಲ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ನಮೂದು ಮಾಡಿರುವುದು ಸರಿಯಲ್ಲ. ಇದರ ಬಗ್ಗೆ ನಮಗೆ ನಿಖರವಾಗಿ ಮಾಹಿತಿ ಕೊಡಲಿ ಎಂದು ಡಿ. ಜೆ. ನಾಯಕ್ ಎಂಬ ವಕೀಲರಿಂದ ಈ ಮೂವರೂ ಪಿಐಎಲ್ ಹಾಕಿಸಿದ್ದಾರೆ.
ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಎಂಬ ಈ ರೀತಿ 47 ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿರುವ ವಕೀಲರು, ಪ್ರತ್ಯೇಕವಾಗಿ ಪ್ರಥಮ ಬಾರಿ ಜಾತಿ ಪಟ್ಟಿ ಈ ರೀತಿ ತಯಾರಿಸಿ ನಮೂದಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಇದನ್ನು ಸರ್ಕಾರ ಹಿಂಪಡೆಯಬೇಕು ಅಥವಾ ನ್ಯಾಯಾಲಯ ಈ ರೀತಿ ಇರುವ ಗಣತಿ ರದ್ದು ಮಾಡಲಿ ಎಂದು ಪಿಐಎಲ್ ಸಲ್ಲಿಕೆ ಮಾಡಿದ್ದೇವೆ. ಸದ್ಯ ಸರ್ಕಾರ ಸೆ.22 ರಂದು ಪ್ರಾರಂಭ ಮಾಡಲು ಉದ್ದೇಶಿಸಿರುವ ಜಾತಿ ಗಣತಿ ತಡೆ ಹಿಡಿಯಬೇಕು ಎಂದಿದ್ದಾರೆ.
ಓದು ಬರಹ ಬರದೇ ಇರುವ ಸಾಮಾನ್ಯ ಜನರು ಇದನ್ನು ಗಣತಿಯಲ್ಲಿ ನಮೂದು ಮಾಡಿದರೆ ಮುಂದೆ ಇವರು ಮತಾಂತರಗೊಂಡ ಕ್ರಿಶ್ಚಿಯನ್ ಎಂದು ಆಗಲಿದೆ. ಸರ್ಕಾರ ಮೊದಲು ಜಾತಿ ಗಣತಿ ನಿಲ್ಲಿಸಬೇಕು, ಮೊದಲು ಜನರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಿದ ಮೇಲೆ ಗಣತಿ ಆರಂಭ ಮಾಡಲು ಈ ಪಿಐಎಲ್ ಸಲ್ಲಿಕೆಯಾಗಿದ್ದು, ನ್ಯಾಯಾಲಯದಿಂದ ಯಾವ ಆದೇಶ ಹೊರ ಬೀಳುತ್ತೋ ಕಾದು ನೋಡಬೇಕಿದೆ.