ಚಾಮರಾಜನಗರ: ಕನ್ನಡ ನಾಡಿನ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರಿಸಲು ಸ್ಪೂರ್ತಿ ಹಾಗೂ ಪ್ರೇರಣೆಯನ್ನು ಉಂಟುಮಾಡಿದವರಲ್ಲಿ ಐಎಎಸ್ ಅಧಿಕಾರಿ ವಿ ಶಿವರಾಮ್ ಮೊದಲಿಗರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಅಧಿಕಾರಿ ಶಿವರಾಂ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಿವರಾಂ ರವರು ಅಧಿಕಾರಿಯಾಗಿ, ಚಲನಚಿತ್ರ ನಟರಾಗಿ, ಸಮಾಜಸೇವಕರಾಗಿ, ನೋಂದವರ ಸಂಘಟನೆಯ ಶಕ್ತಿಯಾಗಿ ಬೆಳೆದವರು. ಮಾನವೀಯ ಮೌಲ್ಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶಿವರಾಮ್ ಬಡವರಿಗೆ ಅಪಾರವಾಗಿ ಸೇವೆ ಸಲ್ಲಿಸಿ ಮನೆ ಹಾಗೂ ಸವಲತ್ತುಗಳು ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ಆಯ್ಕೆಯಾದ ಶಿವರಾಂ ಕನ್ನಡಿಗರಿಗೆ ಹೆಮ್ಮೆಯ ವ್ಯಕ್ತಿ. ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿ ಉನ್ನತ ಪದವಿಯನ್ನು ಪಡೆಯಬಹುದು ಎಂದು ಆದರ್ಶವಾಗಿ ತಿಳಿಸಿದ ಶಿವರಾಂ ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದವರು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಚಾಮಲಾಪುರ ರವಿಕುಮಾರ್ ಅವರ ಅಕಾಲಿಕ ಮರಣಕ್ಕೆ ಮೌನ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗರಸಭಾ ಸದಸ್ಯರಾದ ಆರ್ ಪಿ ನಂಜುಂಡಸ್ವಾಮಿ ವಿ ಶಿವರಾಮರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡುತ್ತಾ ಸಮಾಜದಲ್ಲಿ ನೊಂದವರ ಬೆಳಕಾದವರು ವಿ ಶಿವರಾಂ ರವರು . ತಮ್ಮ ಅಧಿಕಾರದ ಅವಧಿಯಲ್ಲಿ ಬಡವರಿಗೆ ಹಾಗೂ ವಿಶೇಷವಾಗಿ ದಲಿತರಿಗೆ ಅಪಾರವಾದ ಸಹಾಯ ಸಹಕಾರ ನೀಡಿದ ಮಹಾನ್ ವ್ಯಕ್ತಿ. ಅವರ ಮರಣ ಸಮಾಜಕ್ಕೆ ಬಹುದೊಡ್ಡ ನಷ್ಟ. ಹಳ್ಳಿ ಹಳ್ಳಿಗಳಲ್ಲೂ ಪಿ ಶಿವರಾಂರವರ ಸ್ಮರಣೆಯ ಕಾರ್ಯಕ್ರಮ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿರುವುದು ಅವರಿಗೆ ನೀಡಿದ ಮಹಾನ್ ಗೌರವವೆಂದು ತಿಳಿಸಿದರು.

ಕನ್ನಡ ಸಂಘಟನೆಗಳ ಮುಖಂಡರಾದ ನಿಜ ಧ್ವನಿ ಗೋವಿಂದರಾಜು ಮಾತನಾಡಿ ಕನ್ನಡ ನಾಡು ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿದವರು . ಕನ್ನಡದಲ್ಲಿ ಐಎಎಸ್ ಪರೀಕ್ಷೆಯನ್ನು ಬರೆದು ಸಾವಿರಾರು ವಿದ್ಯಾರ್ಥಿಗಳಿಗೆ ನವಚೈತನ್ಯವನ್ನು ತಂದವರು . ಕನ್ನಡದ ಬಗ್ಗೆ ಗೌರವ ಮೂಡಿಸಿದವರು ಎಂದರು.
ದಲಿತ ಸಂಘಟನೆಯ ಮುಖಂಡರಾದ ಕೆಂಪನಪುರ ನಾಗರಾಜ ಮಾತನಾಡಿ ವಿ ಶಿವರಾಮ್ ರವರು ಇಡೀ ರಾಜ್ಯದ ಮುಖಂಡರಾಗಿ ಸಾಮಾಜಿಕ ಕಳಕಳಿ ಹೊಂದಿದ ವ್ಯಕ್ತಿಯಾಗಿದ್ದವರು ಚಾಮರಾಜನಗರ ಜಿಲ್ಲೆಗೆ ವಿಶೇಷವಾದ ಸ್ನೇಹ ಸಂಬಂಧವನ್ನು ಹೊಂದಿದ್ದರು. ನೂರಾರು ಯುವಕರಿಗೆ ಮಾರ್ಗದರ್ಶನ ಮಾಡುವ ಮೂಲಕ ನೊಂದವರ ಸೇವೆಯ ಮೂಲಕ ಎಲ್ಲರ ಹೃದಯದಲ್ಲಿ ಇದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರ ಪ್ರಸಾದ್ ರವರು ಮಾತನಾಡಿ ಒಬ್ಬ ಅಧಿಕಾರಿ ಹೇಗೆ ಸಮಾಜ ಸೇವೆ ಮಾಡಬೇಕು ಸರ್ಕಾರದ ಸವಲತ್ತುಗಳನ್ನು ಬಡ ಜನತೆಗೆ ನೀಡುವ ಬಗ್ಗೆ ಅವರ ಕಳಕಳಿ ಎಲ್ಲಾ ಅಧಿಕಾರಿಗಳಿಗೂ ಮಾದರಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಇಂದು ಸ್ಮರಣೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಶಿವಲಿಂಗ ಮೂರ್ತಿ ,ಕಿಶೋರ್ ಕುಮಾರ್ ಸಂಘಟನೆಗಳ ಮುಖಂಡರಾದ ನಾರಾಯಣ, ನಾಗೇಂದ್ರ ಉಪಸ್ಥಿತರಿದ್ದರು.