ಹೆಚ್ ಡಿ ಕೋಟೆ : ಮೈಸೂರಲ್ಲಿ ಚಿರತೆ ಬಲಿಯಾಗಿದೆ. ಚಲಿಸುತ್ತಿದ್ದ ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಗಂಡು ಚಿರತೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹೆಚ್ ಡಿ ಕೋಟೆಯ ಎಚ್ ಮಟಕೆರೆ ಗ್ರಾಮದ ಪೆಟ್ರೊಲ್ ಬಂಕ್ ಬಳಿ ನಡೆದಿದೆ.
ಮಂಗಳವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಚಿರತೆಯೊಂದು ಮೈಸೂರು-ಮಾನಂದವಾಡಿ ರಸ್ತೆ ದಾಟುವ ಸಂದರ್ಭದಲ್ಲಿ ಹಠಾತ್ ಬಂದಿರುವ ಅಪರಿಚಿತವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಚಿರತೆಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಸುಮಾರು 8 ರಿಂದ 9 ತಿಂಗಳ ಗಂಡು ಚಿರತೆ ಮರಿಯೊಂದು ಮೃತಪಟ್ಟಿದ್ದು, ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿರುವ ಸಾಧ್ಯತೆ ಇಲ್ಲ. ನಾಲ್ಕು ಚಕ್ರದ ವಾಹನ ಅಪಘಾತ ಸಂಭವಿಸಿದ ಬಳಿಕ ಪರಾರಿಯಾಗಿರುವ ಶಂಕೆ ಇದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದಾಗ ಮೃತ ಚಿರತೆ ತಲೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿ ಮೃತಪಟ್ಟಿರುವುದು ದೃಢಪಟ್ಟಿದೆ. ಚಿರತೆ ಮೃತದೇಹವನ್ನು ಹ್ಯಾಂಡ್ ಪೋಸ್ಟ್ ಅರಣ್ಯ ಇಲಾಖೆ ಕಚೇರಿಗೆ ಸ್ಥಳಾಂತರಿಸಿದ್ದು ಮರಣೋತ್ತರ ಪರೀಕ್ಷೆಯ ನಂತರ ಮೃತದೇಹದ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅರಣ್ಯಇಲಾಖೆ ಅಧಿಕಾರಿಗಳು ಹೇಳಿದ್ದಾರೆ.