ತುಮಕೂರು: ಜ.21ರಂದು ನಡೆಯುವ ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 7 ವರ್ಷದ ಪುಣ್ಯ ಸಂಸ್ಮರಣೋತ್ಸವಕ್ಕೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಪುಣ್ಯ ಸಂಸ್ಮರಣೊತ್ಸವದ ಬಗ್ಗೆ ಮಾಹಿತಿ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಜ.21ರಂದು ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 7 ವರ್ಷದ ಪುಣ್ಯ ಸಂಸ್ಮರಣೋತ್ಸವದ ಹಿನ್ನೆಲೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ತುಮಕೂರಿಗೆ ಆಗಮಿಸಲಿದ್ದಾರೆ. ಉಪರಾಷ್ಟ್ರಪತಿಗಳು ಎರಡು ಭಾರಿ ಲೋಕಸಭಾ ಸದಸ್ಯರಾಗಿ, ರಾಜ್ಯಪಾಲರಾಗಿ ಅವರದ್ದೇ ಆದ ಅನುಭವ ಹೊಂದಿದ್ದಾರೆ. ದೂರದೃಷ್ಟಿಯ ಚಿಂತನೆ ಮತ್ತು ತುಂಬಾ ಬುದ್ಧಿವಂತರು. ಶ್ರೀಮಠದ ಇತಿಹಾಸ ಅವರಿಗೆ ತಿಳಿಸುವುದರಲ್ಲಿ ಯಾವುದೇ ರೀತಿಯ ಅಪಚಾರ ಆಗಬಾರದೆಂದು ನಾನು ಇವತ್ತು ಬಂದು ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಾಸಿಗಳ ಕುರಿತು ಮಾತನಾಡಿದ ಅವರು, ಅಕ್ರಮ ವಾಸಿಗಳ ಸಮಸ್ಯೆ ಜಟಿಲವಾಗುತ್ತಿದೆ. ಕ್ರಮ ಕೈಗೊಳ್ಳಬೇಕಾದವರೇ, ಇನ್ನೊಬ್ಬರ ಮೇಲೆ ಬೆರಳು ಮಾಡುತ್ತಿದ್ದಾರೆ. ಭಾರತ ಸರ್ಕಾರ ನೋಡಿಕೊಳ್ಳುತ್ತೆ ಎಂಬ ಮನೋಭಾವನೇ ರಾಜ್ಯ ಸರ್ಕಾರಕ್ಕೆ ಇರುವುದು ಆತಂಕಕಾರಿ. ಹೀಗೆ ಅಕ್ರಮವಾಗಿ ಬಾಂಗ್ಲಾ ವಾಸಿಗಳು ಬಂದರೆ ರಾಜ್ಯದ ಪರಿಸ್ಥಿತಿ ಏನಾಗುತ್ತದೆ ಅನ್ನೋ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ನಾನು ಕೂಡಾ ಅನೇಕ ರಾಜ್ಯಗಳಿಗೆ ಭೇಟಿಕೊಡುತ್ತಿದ್ದೇನೆ. ಈ ರೀತಿಯಾದ ಅವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಅದರಿಂದ ನನ್ನ ಸಲಹೆ ಇಷ್ಟೇ, ಮುಖ್ಯಮಂತ್ರಿಗಳು ಕಠಿಣವಾದ ಕ್ರಮ ನಿರ್ವಹಣೆ ಮಾಡದೇ ಹೋದ್ರೆ, ಮುಂದೊಂದು ದಿನ ಆಗುವ ಗಂಡಾಂತರಕ್ಕೆ ಸರ್ಕಾರವೇ ಹೊಣೆ. ಕೇಂದ್ರ ಸರ್ಕಾರವನ್ನ ಬೆರಳು ಮಾಡಿ ತೋರಿಸೋ ಕೆಲಸ ಬಿಟ್ಟು, ಅವಶ್ಯವಿದ್ರೆ ಕೇಂದ್ರ ಸರ್ಕಾರ ಉಪಯೋಗಿಸಿಕೊಂಡು ಕೆಲಸ ಮಾಡಿ ಎಂದರು.



