ಮಡಿಕೇರಿ : ತಾನು ಸಂಬಂಧ ಹೊಂದಿದ್ದ ಮಹಿಳೆ ಮೇಲೆ ಅನುಮಾನ ಮತ್ತು ಕಾಫಿ ಬೆಳೆಯ ಆಸೆಗೆ ಮಗು ಸೇರಿ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಂದಿದ್ದ ಆರೋಪಿಗೆ ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶ ಎಸ್. ನಟರಾಜ್, ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ. ಘಟನೆ ನಡೆದು ಕೇವಲ 9 ತಿಂಗಳಲ್ಲಿ ವಿಚಾರಣೆ ಪೂರ್ಣಗೊಂಡು ಶಿಕ್ಷೆ ಘೋಷಣೆಯಾಗಿರುವುದು ಕೂಡ ಇಲ್ಲಿ ಗಮನಾರ್ಹ.
ಇದೇ ವರ್ಷ ಮಾರ್ಚ್ 27ರಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಬಾಳುಗೋಡಿನ ತೋಟದ ಮನೆಯೊಂದರಲ್ಲಿ ನಾಲ್ವರನ್ನು ಭೀಕರವಾಗಿ ಮರ್ಡರ್ ಮಾಡಲಾಗಿತ್ತು. 70 ವರ್ಷದ ಕರಿಯ ಹಾಗೂ ಆತನ ಪತ್ನಿ ಗೌರಿ, ಮೊಮ್ಮಗಳು 30 ವರ್ಷದ ನಾಗಿ, ನಾಲ್ಕು ವರ್ಷದ ಕಾವೇರಿ ಘಟನೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಇದೇ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ವಾಸವಿದ್ದ ಕೇರಳ ಮೂಲದ ಮಾನಂದವಾಡಿ ಜಿಲ್ಲೆಯ ಅತ್ತಿಮಾಲಾ ನಿವಾಸಿ ಗಿರೀಶ ಎಂಬುವನನ್ನು ಅನುಮಾನದ ಆಧಾರದಲ್ಲಿ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತಾನೇ ಕೊಲೆ ಮಾಡಿರೋದಾಗಿ ಆತ ಒಪ್ಪಿಕೊಂಡಿದ್ದ.
ಮೊದಲ ಗಂಡನಿಂದ ಬೇರಾದ ಬಳಿಕ ನಾಗಿ ಸುಬ್ರಮಣಿ ಎಂಬವನ ಜೊತೆ ಇದ್ದಳು. ಆತನನ್ನೂ ಬಿಟ್ಟ ಬಳಿಕ ನಾಲ್ಕು ವರ್ಷದ ಮಗಳು ಕಾವೇರಿ ಜೊತೆ ತನ್ನ ತಂದೆ ಕರಿಯನ ಮನೆಯಲ್ಲಿಯೇ ವಾಸವಿದ್ದಳು. ಹೀಗಿರಬೇಕಾದ್ರೆ ಇವರ ಮನೆಯಲ್ಲೇ ನೆಲೆಸಿದ್ದ ಗಿರೀಶ ನಾಗಿಯನ್ನ ಬುಟ್ಟಿಗೆ ಹಾಕಿಕೊಂಡಿದ್ದ. ವಿವಾಹವಾಗಿ ಐದು ಮಕ್ಕಳ ತಂದೆಯಾಗಿದ್ದರೂ ನಾಗಿ ಜೊತೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದ. ಹೀಗಿರುವಾಗ ನಾಗಿ ಸುಬ್ರಮಣಿ ಜೊತೆ ಸಂಬಂಧ ಮುಂದುವರಿಸಿದ್ದಾಳೆ ಎಂದು ಈತ ಅನುಮಾನ ಪಟ್ಟಿದ್ದ. ಈ ವಿಚಾರವಾಗಿ ಹಲವು ಬಾರಿ ಜಗಳವೂ ನಡೆದಿತ್ತು. ಇದರ ಜೊತೆಗೆ ನಾಗಿ ಅಪ್ಪ ಕರಿಯನಿಗಿದ್ದ 1 ಎಕರೆ ಕಾಫಿ ತೋಟ ಮತ್ತು ಮನೆಯಲ್ಲಿದ್ದ 10-15 ಚೀಲ ಕಾಫಿ ಬೆಳೆ ಮೇಲೆ ಈತ ಕಣ್ಣಿಟ್ಟಿದ್ದ. ಇದರ ಮಾರಾಟ ವಿಚಾರದಲ್ಲೂ ಗಿರೀಶ ತಗಾದೆ ತೆಗೆದಿದ್ದ.
ಇನ್ನು ಮಾರ್ಚ್ 27ರಂದು ಕೆಲಸಕ್ಕೆ ಹೋಗಿ ಬಂದ ನಾಗಿ ಮತ್ತು ಗಿರೀಶನ ನಡುವೆ ಜಗಳವಾಗಿದ್ದು, ಇದು ವಿಕೋಪಕ್ಕೆ ಹೋಗಿ ನಾಗಿಯನ್ನು ಆತ ಕಡಿದು ಕೊಂದಿದ್ದ. ಆ ಸಂದರ್ಭ ತಡೆಯಲು ಬಂದ ಕರಿಯ ಮತ್ತು ಆತನ ಪತ್ನಿ ಗೌರಿಯನ್ನೂ ಕೊಚ್ಚಿ ಕೊಲೆ ಮಾಡಿದ್ದ. ಬಳಿಕ ಅಲ್ಲೇ ಇದ್ದ ನಾಲ್ಕು ವರ್ಷದ ಕಾವೇರಿಯನ್ನೂ ಹತ್ಯೆ ಮಾಡಿದ್ದ. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಮೇ 12ರಂದು ಆರೋಪ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು.



