ರಾಯ್ಪುರ: ದಕ್ಷಿಣ ಆಫ್ರಿಕಾ ಎದುರು ಎರಡನೇ ಏಕದಿನ ಪಂದ್ಯದಲ್ಲಿಯೂ ಭಾರತ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಶತಕವನ್ನು ಬಾರಿಸಿದ್ದು, ರಾಂಚಿಯಲ್ಲಿ ಶತಕ ಗಳಿಸಿದ್ದ ಕೊಹ್ಲಿ, ಇದೀಗ ಎರಡನೇ ಪಂದ್ಯದಲ್ಲಿಯೂ ಶತಕವನ್ನು ಬಾರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಆ ಮೂಲಕ ಅವರು ತಮ್ಮ ಒಡಿಐ ವೃತ್ತಿ ಜೀವನದಲ್ಲಿ 53ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ ಹಾಗೂ ಒಟ್ಟಾರೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 84ನೇ ಶತಕವನ್ನು ಗಳಿಸಿದ್ದು, ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಗೆ ಇನ್ನಷ್ಟು ಸನಿಹವಾಗಿದ್ದಾರೆ ಎನ್ನಲಾಗುತ್ತಿದೆ.
ಇಲ್ಲಿನ ಶಾಹೀದ್ ವೀರ್ ನಾರಾಯನ್ ಸಿಂಗ್ ಇಂಟರ್‌ನ್ಯಾಷನಲ್ ಬುಧವಾರ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ವಿರಾಟ್ ಕೊಹ್ಲಿ, ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದು, ಆಡಿದ 90 ಎಸೆತಗಳಲ್ಲಿಯೇ ತಮ್ಮ 53ನೇ ಶತಕವನ್ನು ಪೂರ್ಣಗೊಳಿಸಿ, ಆ ಮೂಲಕ ಸತತ ಎರಡು ಏಕದಿನ ಪಂದ್ಯಗಳಲ್ಲಿ ಶತಕ ಸಿಡಿಸಿದಂತಾಯಿತು. ಇದಕ್ಕೂ ಮುನ್ನ ರಾಂಚಿಯಲ್ಲಿ ಅವರು ಶತಕವನ್ನು ಗಳಿಸಿದ್ದರು. ಈ ಪಂದ್ಯದಲ್ಲಿ ಅವರು 120 ಎಸೆತಗಳಲ್ಲಿ 130 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು 2016 ಹಾಗೂ 2018ರ ನಡುವೆ ಸತತ ಎರಡು ಶತಕಗಳನ್ನು ಹಲವು ಬಾರಿ ಗಳಿಸಿದ್ದಾರೆ. ತಮ್ಮ ಒಡಿಐ ವೃತ್ತಿ ಜೀವನದಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ್ದು, ಇದು 11ನೇ ಬಾರಿ. ಒಡಿಐ ಕ್ರಿಕೆಟ್ ಇತಿಹಾಸದಲ್ಲಿಯೇ ಈ ರೀತಿಯ ದಾಖಲೆಯನ್ನು ಕೊಹ್ಲಿಯನ್ನು ಬಿಟ್ಟು ಬೇರೆ ಯಾರೂ ಮಾಡಿಲ್ಲ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 84 ಶತಕಗಳನ್ನು ಗಳಿಸಿದ್ದು, ಸಚಿನ್ ತೆಂಡೂಲ್ಕರ್ ಅವರು 100 ಶತಕಗಳ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಜೋ ರೂಟ್ ಮೂರನೇ ಸ್ಥಾನದಲ್ಲಿದ್ದಾರೆ. ತಮ್ಮ 53ನೇ ಶತಕವನ್ನು ಪೂರ್ಣಗೊಳಿಸಿದ ಬಳಿಕ ವಿರಾಟ್ ಕೊಹ್ಲಿ ಜಿಂಕೆಯಂತೆ ಜಿಗಿದು ಸಂಭ್ರಮಸಿದರು. ನಂತರ ಬ್ಯಾಟ್ ಹಾಗೂ ಹೆಲ್ಮೆಟ್ ಎರಡನ್ನೂ ತೆಗೆದು ಮೇಲಕ್ಕೆ ಎತ್ತುವ ಮೂಲಕ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರತ್ತ ಸುತ್ತಿ ಸಂಭ್ರಮಿಸಿದರು.



