ಬೆಂಗಳೂರು: ಗದಗ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಎಚ್.ಕೆ.ಪಾಟೀಲ್ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನಡುವಿನ ರಾಜಕೀಯ ಜಟಾಪಟಿ ತೀವ್ರಗೊಂಡಿದೆ.
ಇನ್ನೂ ಈ ಬಗ್ಗೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಬೊಮ್ಮಾಯಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂಬ ಎಚ್.ಕೆ.ಪಾಟೀಲ್ ಅವರ ಆಗ್ರಹವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಳ್ಳಿಹಾಕಿದ್ದು, “ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಅವರ ಬೇಡಿಕೆ ಹಾಸ್ಯಾಸ್ಪದ” ಎಂದು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಬಸವರಾಜ ಬೊಮ್ಮಾಯಿ, ಗದಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಗದಗ ಶಾಸಕ ಹಾಗೂ ಸಚಿವ ಎಚ್.ಕೆ.ಪಾಟೀಲ್ (ಹನುಮಂತಗೌಡ ಕೃಷ್ಣಗೌಡ ಪಾಟೀಲ್) ಅವರ ಹೆಸರು ಮೂರು ಬಾರಿ ದಾಖಲಾಗಿರುವುದಾಗಿ ಆರೋಪಿಸಿದ್ದರು.
ಈ ಆರೋಪಕ್ಕೆ ಭಾನುವಾರ ಗದಗದಲ್ಲಿ ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್, ತಮ್ಮದೇ ಹೆಸರು ಮತ್ತು ತಂದೆಯ ಹೆಸರನ್ನು ಹೊಂದಿರುವ ಇಬ್ಬರು ಸ್ಥಳೀಯ ನಾಗರಿಕರನ್ನು ಮಾಧ್ಯಮಗಳ ಮುಂದೆ ಹಾಜರುಪಡಿಸಿ, ಅವರ ಆಧಾರ್ ಕಾರ್ಡ್ಗಳನ್ನು ಪ್ರದರ್ಶಿಸಿದರು. ಮತದಾರರ ಪಟ್ಟಿಯಲ್ಲಿರುವುದು ನಕಲಿ ಹೆಸರುಗಳಲ್ಲ. ಅವರೂ ನಮ್ಮ ಕ್ಷೇತ್ರದ ಗೌರವಾನ್ವಿತ ನಾಗರಿಕರು. ಅನುಭವಿ ರಾಜಕಾರಣಿಯಾಗಿರುವ ಬಸವರಾಜ ಬೊಮ್ಮಾಯಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಆರೋಪ ಮಾಡಿದ್ದಾರೆ. ತಮ್ಮ ಗೌರವ ಉಳಿಸಿಕೊಳ್ಳಬೇಕಾದರೆ ಗದಗ ಹಾಗೂ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಮಾಝಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ನಾನು ಹೊಂದಿದ್ದ ದಾಖಲೆಗಳ ಆಧಾರದ ಮೇಲೆಯೇ ಹೇಳಿಕೆ ನೀಡಿದ್ದೇನೆ. ಯಾವುದೇ ವೈಯಕ್ತಿಕ ಆರೋಪ ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ಗದಗ ಕ್ಷೇತ್ರದಲ್ಲಿ 2,365 ಮತ್ತು ರೋಣ ಕ್ಷೇತ್ರದಲ್ಲಿ 3,804 ದ್ವಿಪ್ರತಿ (ಡ್ಯೂಪ್ಲಿಕೇಟ್) ಮತದಾರರ ಹೆಸರುಗಳಿವೆ ಎಂದು ಹೊಸ ಆರೋಪ ಮಾಡಿರುವ ಅವರು, ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳ ಕುರಿತು ಮುಖ್ಯ ಚುನಾವಣಾಧಿಕಾರಿಗಳು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.



