ಬೆಂಗಳೂರು: ಮತದಾರರು ತಮ್ಮ ಮತದಾನದ ಹಕ್ಕನ್ನು ಭಯ, ಒತ್ತಡ ಮತ್ತು ಯಾವುದೇ ಪ್ರಚೋದನೆಯಿಲ್ಲದೆ ಮುಕ್ತವಾಗಿ ಮತ್ತು ನ್ಯಾಯಯುತವಾಗಿ ಚಲಾಯಿಸಬೇಕೆಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕರೆ ನೀಡಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ನಗರದಲ್ಲಿ ಆಯೋಜಿಸಿದ್ದ 16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಮಾತನಾಡಿದರು. ಬಳಿಕ ಚುನಾವಣಾ ಕಾರ್ಯಕ್ಷಮತೆಯಲ್ಲಿನ ಶ್ರೇಷ್ಠತೆಗಾಗಿ ಭಾರತ ಚುನಾವಣಾ ಆಯೋಗವು ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗಳನ್ನೂ ರಾಜ್ಯಪಾಲರು ವಿತರಿಸಿದರು.
ಅತ್ಯುತ್ತಮ ಚುನಾವಣಾ ಕಾರ್ಯ ನಿರ್ವಹಿಸಿದ ತುಮಕೂರು ಜಿಲ್ಲೆಯ ಶುಭಾ ಕಲ್ಯಾಣ್, ಚಾಮರಾಜ ನಗರದ ಶಿಲ್ಪಾನಾಗ್ ಸಿ.ಟಿ, ಕೊಪ್ಪಳದ ಸುರೇಶ್ ಬಿ. ಇಟ್ನಾಳ್, ಹಾವೇರಿಯ ಡಾ.ವಿಜಯ ಮಹಾಂತೇಶ ಬಿ. ದಾನಮ್ಮನವರ್, ಬೆಂಗಳೂರು ನಗರದ ಜಿ. ಜಗದೀಶ್ ಹಾಗೂ ಯಾದಗಿರಿಯ ಡಾ. ಸುಶೀಲಾ ಬಿ ಅವರಿಗೆ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಪ್ರಾಮುಖ್ಯತೆ, ಘನತೆ ಮತ್ತು ಮಹತ್ವವು ಮತದಾನ ಪ್ರಕ್ರಿಯೆಯ ಮೂಲಕ ಬಲಗೊಳ್ಳುತ್ತದೆ. ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಈ ಪ್ರಜಾತಂತ್ರ ವ್ಯವಸ್ಥೆಯನ್ನು ಪ್ರಜ್ಞಾಪೂರ್ವಕವಾಗಿ ನಾಗರಿಕರು ಚಲಾಯಿಸುವ ಮತದಾನ ಪ್ರಕ್ರಿಯೆಯೇ ಕಾಪಾಡುತ್ತದೆ. ಒಂದು ಮತ, ಒಂದು ಧ್ವನಿ, ಒಂದು ಜವಾಬ್ದಾರಿ ಪ್ರಜಾಪ್ರಭುತ್ವದ ಆತ್ಮವಾಗಿದೆ ಎಂದು ಹೇಳಿದರು.
ಎಲ್ಲರನ್ನೂ ಒಳಗೊಂಡಿರುವ ಪಾರದರ್ಶಕ ಚುನಾವಣಾ ಪ್ರಕ್ರಿಯೆಯ ಚೌಕಟ್ಟನ್ನು ಭಾರತ ಹೊಂದಿದ್ದು, ಇದಕ್ಕೆ ಎಲ್ಲಾ ಸಕ್ರಿಯ ಮತದಾರರು ನೆರವಾಗುತ್ತಿದ್ದಾರೆ. ಮತದಾನದ ಹಕ್ಕು ನಾಗರಿಕರಿಗೆ ಸಂವಿಧಾನ ನೀಡಿರುವ ಸರ್ವೋಚ್ಚ ಅಧಿಕಾರ. ಪ್ರತಿಯೊಂದು ಮತವೂ ದೇಶದ ನೀತಿಗಳು, ಅಭಿವೃದ್ಧಿಗೆ ದಿಕ್ಕು, ಮುಂದಿನ ಪೀಳಿಗೆಯ ಭವಿಷ್ಯ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಬಲಪಡಿಸುತ್ತೇವೆ ಎಂದು ತಿಳಿಸಿದರು.



