Thursday, April 30, 2026
Google search engine

Homeರಾಜ್ಯಬಿಸಿಗಾಳಿ ಎಚ್ಚರಿಕೆ ನಡುವೆ ನೀರಿನ ಕೊರತೆ : ಜಿಲ್ಲಾಡಳಿತಕ್ಕೆ ಸಚಿವರ ಕಟ್ಟುನಿಟ್ಟಿನ ಸೂಚನೆ

ಬಿಸಿಗಾಳಿ ಎಚ್ಚರಿಕೆ ನಡುವೆ ನೀರಿನ ಕೊರತೆ : ಜಿಲ್ಲಾಡಳಿತಕ್ಕೆ ಸಚಿವರ ಕಟ್ಟುನಿಟ್ಟಿನ ಸೂಚನೆ

ಚಿಕ್ಕಬಳ್ಳಾಪುರ : ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆಯವರು ಕಾಲಕಾಲಕ್ಕೆ ನೀಡಲಿರುವ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮನವಿ ಮಾಡಿದರು.

ನಗರ ಹೊರವಲಯ  ಜಿಲ್ಲಾ ಪಂಚಾಯತ್‌ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹವಾಮಾನ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಕಡಿಮೆ ಪ್ರಮಾಣದ ಮಳೆ ಆಗಲಿದೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾಡಿಕೆ ಮಳೆ ಆಗಬಹುದು ಎಂದು ಅಭಿಪ್ರಾಯಿಸಿದೆ. ಅಲ್ಲದೆ ಮಳೆಯ ವೈಪರೀತ್ಯಗಳು ಏನೇ ಆದರೂ ನೀರು ಪೂರೈಕೆ ಹಾಗೂ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ಇನ್ನು ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಕೊರೆದಿರುವ ೩೧೩ ಕೊಳವೆ ಬಾವಿಗಳಿಗೆ ಒಂದೆರಡು ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ ಜನರಿಗೆ ನೀರು ಪೂರೈಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಅಲ್ಲದೆ ಕುಡಿಯುವ ನೀರಿನ ಪೂರೈಕೆಯ ತುರ್ತು ಕ್ರಮಕ್ಕಾಗಿ ರಾಜ್ಯ ಸರ್ಕಾರ 1.5 ಕೋಟಿ ಹಣವನ್ನು ಜಿಲ್ಲೆಗೆ ಬಿಡುಗಡೆ ಮಾಡಿದೆ. ಜೊತೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಗತ್ಯಕ್ಕೆ ತಕ್ಕಂತೆ ಅನುದಾನವನ್ನು ಕಾಲ ವಿಳಂಬವಿಲ್ಲದೆ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಮತ್ತು ಗೋಪಾಲಕೃಷ್ಣ ಅಮಾನಿ ಕರೆಗೆ ನಗರದ ಚರಂಡಿ ನೀರು ಸೇರುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ತಡೆಯಲು ಚಿಕ್ಕಬಳ್ಳಾಪುರ ನಗರಕ್ಕೆ ಪೂರ್ಣಪ್ರಮಾಣದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಲು ೩೦ ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಕಾರ್ಯ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಕಳೆದ ಫೆಬ್ರವರಿಯಲ್ಲಿ 12 ಗ್ರಾಮಗಳು, ಮಾರ್ಚ್ ನಲ್ಲಿ 23 ಗ್ರಾಮಗಳು, ಪ್ರಸ್ತುತ 31 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೀರಿನ ಸಮರ್ಪಕ ಪೂರೈಕೆಗಾಗಿ ಖಾಸಗಿ ಕೊಳವೆ ಮಾಲಿಕರ ಸಹಕಾರ ಪಡೆದು ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 108 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಲಾಗಿದೆ. ಅದಕ್ಕೆ ತಕ್ಕಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದು ಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ನೀರಿನ ಕೊರತೆ ನೀಗಿಸುವ ಸಲುವಾಗಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಸಮಸ್ಯೆ ನೀಗಿಸಲು ಈಗಾಗಲೇ ಸೂಚನೆ ನೀಡಿದ್ದು, ವರ್ಗ-1ರ ಅನುದಾನದಲ್ಲಿ ಶೇ.30-40ರಷ್ಟು ಕುಡಿಯುವ ನೀರಿಗೆ ಬಳಸಲು ಅವಕಾಶ ನೀಡಲಾಗಿದೆ. ಇದನ್ನು ಬಳಸಿಕೊಂಡು ಸಮಸ್ಯೆ ಆಗದಂತೆ ಎಚ್ಚರ ವಹಿಸಿ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಮಾತನಾಡಿದ ಸಣ್ಣ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಮತ್ತು ಜೆಜೆಎಂ ಅಧಿಕಾರಿಗಳು ಯುದ್ಧದ ತೀವ್ರತೆ ಬೋರ್‌ವೆಲ್ ಕೊರೆಸುವುದರ ಮೇಲೂ ಆಗಿದೆ. ಎಸ್.ಆರ್.ಬೆಲೆಗಿಂತ ಹೆಚ್ಚಾಗಿದೆ. ಬಿಟ್‌ಗಳ ಬೆಲೆ ಹೆಚ್ಚಳವಾಗಿರುವುದೇ ಹೊಸ ಬೋರ್‌ವೆಲ್ ಕೊರೆಸಲು ಏಜೆನ್ಸಿಗಳು ಮುಂದೆ ಬರದಂತೆ ಆಗಿದ್ದು, ಆ ಪ್ರಕಾರ ಮಂಚೇನ ಹಳ್ಳಿ- 3, ಚಿಕ್ಕಬಳ್ಳಾಪುರ -8, ಗೌರಿಬಿದನೂರು-15 ಬಾಗೇಪಲ್ಲಿ-1 ಹೊಸ ಬೋರ್ ಕೊರೆಯಬೇಕಿದೆ ಎಂದರು.

ಈ ವೇಳೆ ಮಾತನಾಡಿದ ಸಚಿವರ 15 ದಿನಗಳಲ್ಲಿ ಹೊಸ ಬೋರ್ ಕೊರೆಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗಡೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್.ರಮೇಶ್, ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್, ಚಿಮುಲ್ ಅಧ್ಯಕ್ಷ ಮಂಜುನಾಥರೆಡ್ಡಿ, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

RELATED ARTICLES
- Advertisment -
Google search engine

Most Popular