ನವದೆಹಲಿ : ಭಾರತವು ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದೆ. ಶಾಂತಿಯಲ್ಲಿ ಭಾರತ ನಂಬಿಕೆಯಿಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹೈದರಾಬಾದ್ ಹೌಸ್‌ನಲ್ಲಿ ನಡೆದ ಭಾರತ-ರಷ್ಯಾ 23ನೇ ಶೃಂಗಸಭೆಯಲ್ಲಿ ಪುಟಿನ್ ಜೊತೆಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಮತ್ತೊಮ್ಮೆ ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸುವಂತೆ ಶಾಂತಿಪಾಠ ಮಾಡಿದರು.
ಸಂವಾದದಲ್ಲಿ ಮಾತನಾಡಿದ ಮೋದಿ, ಪುಟಿನ್ ಅವರ ಈ ಭೇಟಿಯು ಐತಿಹಾಸಿಕವಾಗಿದೆ. ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ನಾವು ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇವೆ. ರಷ್ಯಾ ಶಾಂತಿ ಮಾರ್ಗ ಕಂಡುಕೊಳ್ಳಬೇಕಿದೆ. ಏಕೆಂದರೆ ಶಾಂತಿಯ ಮಾರ್ಗದಲ್ಲಿ ಪ್ರಯಾಣಿಸಿದ್ದರೆ ಮಾತ್ರ ವಿಶ್ವಕ್ಕೆ ಪ್ರಯೋಜನವಾಗುತ್ತದೆ. ಶಾಂತಿಗಾಗಿ ನಾವು ಎಲ್ಲಾ ಪ್ರಯತ್ನಗಳನ್ನ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಬಳಿಕ ಸಂವಾದದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಪ್ರಧಾನಿ ಮೋದಿ ಅವರ ಪ್ರಯತ್ನಗಳನ್ನ ಶ್ಲಾಘಿಸಿದರು.
ಇದೇ ವೇಳೆ ಭಾರತ – ರಷ್ಯಾ ನಡುವಿನ ಸಂಬಂಧದ ಕುರಿತು ಮಾತನಾಡಿದ ಮೋದಿ, ನೀವು 2001 ರಲ್ಲಿ ಅಧಿಕಾರ ವಹಿಸಿಕೊಂಡು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿ 25 ವರ್ಷಗಳು ಕಳೆದಿವೆ. ಆ ಮೊದಲ ಭೇಟಿಯು ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಗೆ ಬಲವಾದ ಅಡಿಪಾಯ ಹಾಕಿತು. ಇನ್ನು ನಿಮ್ಮೊಂದಿಗಿನ ನನ್ನ ಸಂಬಂಧವು 25 ವರ್ಷಗಳನ್ನ ಪೂರೈಸಿದೆ ಅನ್ನೋದು ಮತ್ತೊಂದು ಹೆಮ್ಮೆ ಎಂದು ಮೋದಿ ತಿಳಿಸಿದರು.
ಮುಂದುವರೆಸುತ್ತಾ COVID-19 ರಿಂದ ಈವರೆಗೆ ಈ ಜಗತ್ತು ಅನೇಕ ಬಿಕ್ಕಟ್ಟುಗಳನ್ನ ಎದುರಿಸಿದೆ. ಈ ಎಲ್ಲ ಜಾಗತಿಕ ಸವಾಲುಗಳನ್ನು ಶೀಘ್ರದಲ್ಲೇ ನಿವಾರಿಸಲಾಗುವುದು. ನಾವಿಂದು ಪ್ರಮುಖ ಜಾಗತಿಕ ಸಮಸ್ಯೆಗಳನ್ನ ಚರ್ಚಿಸುತ್ತಿದ್ದೇವೆ, ಎಲ್ಲವೂ ಬಗೆಹರಿಯುವ ವಿಶ್ವಾಸ ನನಗಿದೆ. ಇದಕ್ಕೂ ಮುನ್ನ ಭಾರತ ಪ್ರವಾಸದಲ್ಲಿರುವ ಪುಟಿನ್ ಅವರು ರಾಷ್ಟ್ರಪತಿ ಭವನಕ್ಕೆ ಆಗಮಿಸುತ್ತಿದ್ದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ಅದ್ಧೂರಿ ಸಂಗೀತದ ಮೂಲಕ ರೆಡ್ ಕಾರ್ಪೆಟ್ ಹಾಸಿ ಪುಟಿನ್‌ಗೆ ಸ್ವಾಗತ ಕೋರಲಾಯಿತು. ಅಲ್ಲದೇ ಸೇನಾಪಡೆ ಸಿಬ್ಬಂದಿ 21 ಗನ್ ಸೆಲ್ಯೂಟ್, ಮಿಲಿಟರಿ ಶಿಸ್ತು ಮತ್ತು ಸಕಲ ಗೌರವ ಸಲ್ಲಿಸಿದರು.



