ಮೈಸೂರು: ಬಿಜೆಪಿಯವರು ಬಾನು ಮುಷ್ತಾಕ್ ದನದ ಮಾಂಸ ತಿಂತಾರೆ ಅಂತಿರಲ್ಲ ನೀವು ನೋಡಿದ್ರಾ? ಬೀಫ್ ಸೇಲ್ ಮಾಡುವ ಟಾಪ್ 10 ಮಂದಿ ನಿಮ್ಮ ಬಿಜೆಪಿಯವರೇ ಇದ್ದಾರೆ. ಪದೇ ಪದೇ ವಿವಾದ ಸೃಷ್ಟಿಸೋ ಪ್ರತಾಪ್ ಸಿಂಹರಂಥವರ ವಿರುದ್ಧ ಇವತ್ತು DCP ಗೆ ದೂರು ಕೊಟ್ಟಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತಾಡಿದ ಎಂ ಲಕ್ಷ್ಮಣ್, ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಿದ್ರೆ ಏನ್ ತಪ್ಪು. ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ದಾರೆ. ತನ್ವಿರ್ ಸೇಠ್ ಚಾಮುಂಡೇಶ್ವರಿ ಗರ್ಭಗುಡಿ ಬಳಿ ಹೋಗಿ ಪ್ರಾರ್ಥನೆ ಮಾಡಿದ್ದಾರೆ. ಅವರು ಮುಸ್ಲಿಮರಲ್ವಾ ಎಂದು ಪ್ರಶ್ನೆ ಮಾಡಿದರು.
ಮೈಸೂರು-ಕೊಡಗು ಕ್ಷೇತ್ರದ ಹಾಲಿ ಮಾಜಿ ಸಂಸದರು ಮೈಸೂರಿನ ಮಾನ ಮರ್ಯಾದೆ ಹರಾಜ್ ಹಾಕ್ತಿದ್ದಾರೆ. ರಾಜ ಮನೆತನದಿಂದ ಬಂದವರು ಈ ರೀತಿ ಮಾತಾಡುತ್ತಿರಲಿಲ್ಲ. ರಾಜರ ಮಾತಿನಲ್ಲಿ ತೂಕ ಇರ್ಬೇಕು, ಗಂಭೀರ್ಯತೆ ಇರಬೇಕು. ಬೆಳಗ್ಗೆ ಒಂದು ಮಾತು ಸಂಜೆ ಒಂದು ಮಾತಾಡಬಾರದು ಎಂದು ಯದುವೀರ್ ಒಡೆಯರ್ ವಿರುದ್ಧವೂ ಎಂ ಲಕ್ಷ್ಮಣ್ ಕಿಡಿ ಕಾರಿದರು.
ಒಬ್ಬ ಅರ್ಚಕ ಸಿಎಂ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ್ದಾನೆ. ಒಬ್ಬ ಅರ್ಚಕ ಮುಖ್ಯಮಂತ್ರಿಯನ್ನ ಮುಸಂಡಿ, ತಲೆ ಹಿಡುಕ ಅಂತಾನೆ ಅಂದ್ರೆ ಏನು ಅರ್ಥ..? ಕರ್ನಾಟಕದಲ್ಲಿ 2 ಬಾರಿ ಸಿದ್ದರಾಮಯ್ಯ ಸಿಎಂ ಆಗಿರೋದನ್ನ ಕೆಲವರಿಂದ ಸಹಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಅದೇ ಕಾರಣಕ್ಕೆ ಇಂಥಾ ಮಾತಾಡುತ್ತಿದ್ದಾರೆ ಎಂದು ಎಂ ಲಕ್ಷ್ಮಣ್ ಗರಂ ಆದರು.
ಈ ಬಾರಿಯ ದಸರಾ ಉದ್ಘಾಟನೆಗೆ ಬುಕರ್ ಪುರಸ್ಕೃತ ಬಾನು ಮುಷ್ತಾಕ್ಗೆ ಆಹ್ವಾನ ನೀಡಿರುವ ವಿಚಾರವಾಗಿ ಚರ್ಚೆಗಳು ನಿಲ್ಲುತ್ತಿಲ್ಲ. ಈ ಕುರಿತು ಹೋರಾಟ ಮಾಡುವುದಾಗಿ ಬಿಜೆಪಿ ಘೋಷಿಸಿದೆ. ಮತ್ತೊಂದು ಕಡೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಬರೋದಾದ್ರೆ ಹಿಂದೂ ವಿಧಿ ವಿಧಾನದ ಪ್ರಕಾರ ಬನ್ನಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಹ್ವಾನಿಸಿದ್ದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಮಾಜಿ ಸಂಸದರು, ಕನ್ನಡವನ್ನ ಭುವನೇಶ್ವರಿಯಾಗಿ ನೋಡೋದಕ್ಕೆ ಮುಸಲ್ಮಾನರಿಗೆ ಕಷ್ಟ ಆಗುತ್ತೆ. ಕನ್ನಡವನ್ನ ಭುವನೇಶ್ವರಿಯಾಗಿ ಮಾಡೋ ಮೂಲಕ ದೂರ ಇಟ್ಟಿದ್ದೀರಾ ಅಂತೀರಲ್ಲ ಬಾನು ಮುಷ್ತಾಕ್ ಅವರೇ. ಕಾವೇರಿ ಕೂಡ ದೈವಿ ಸ್ವರೂಪ, ಈ ನೀರಿಂದಾನು ನಿಮ್ಮನ್ನ ಹೊರಗಡೆ ಇಟ್ಟಿದ್ದೇವಾ? ಕಾವೇರಿ ನೀರು ಕುಡಿಯುವಾಗ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ ಎಂದು ಪ್ರಶ್ನೆ ಮಾಡಿದ್ದರು.
ಇಫ್ತಿಯಾರ್ ಕೂಟಕ್ಕೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೋಗಲಿ. ಅವರಿಗೆ ಬಿರಿಯಾನಿ ಹಾಕುವ ಮೊದಲು ತಲೆಗೆ ಟೋಪಿ ಹಾಕಿತ್ತೀರಾ. ಮಂಡಿ ಊರಿಸಿ, ಬೊಗಸೆ ಇಟ್ಟು ಪ್ರಾರ್ಥನೆ ಮಾಡಿಸ್ತೀರಿ. ಮುಸ್ತಾಕ್ ಅವರೇ ದಸರಾ ಉದ್ಘಾಟನೆಗೆ ಬರೋದಾದ್ರೆ ಹಿಂದೂ ವಿಧಿ ವಿಧಾನದ ಪ್ರಕಾರ ಬನ್ನಿ. ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು, ಮಲ್ಲಿಗೆ ಮುಡಿದು ಬಂದು ಉದ್ಘಾಟನೆ ಮಾಡಿ ನಮಗೆ ಏನು ತೊಂದರೆ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದರು.