ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪತ್ರಕರ್ತರಿಗೆ ತರಬೇತಿ ನೀಡಲು ಕಾಲೇಜು ಆರಂಭಿಸಿ. ಹಿರಿಯ ಪತ್ರಕರ್ತರ ಅನುಭವ ಬಳಸಿಕೊಂಡು ಅವರಲ್ಲಿ ನೈತಿಕ ಮೌಲ್ಯ ಬೆಳೆಸಿ. ಸರ್ಕಾರ ಇದಕ್ಕಾಗಿ 1 ಎಕರೆ ಜಾಗ ನೀಡಲು ಸಿದ್ಧಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ವಿಚಾರವಾಗಿ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನೀವು ಹೇಳುವುದನ್ನೇ ನಿಜ ಎಂದು ಭಾವಿಸಿ ನಾವು ಪ್ರತಿಕ್ರಿಯೆ ನೀಡುತ್ತೇವೆ. ಕುಮಾರಸ್ವಾಮಿ ನೀಡದ ಹೇಳಿಕೆಯನ್ನು, ಅವರು ಹೇಳಿದ್ದಾರೆ ಎಂದು ಸುಳ್ಳು ಹೇಳಿ ನಮ್ಮ ಬಳಿ ಪ್ರತಿಕ್ರಿಯೆ ಕೇಳುತ್ತೀರಿ. ಈ ರೀತಿ ಕೇಳುವವರಿಗೆ, ದಾರಿ ತಪ್ಪಿಸುವವರಿಗೆ ಪ್ರೆಸ್ ಕ್ಲಬ್ ನಿಂದ ತರಬೇತಿ ನೀಡಬೇಕು. ಸಮಾಜ ಒಡೆದು, ಅಶಾಂತಿ ಮೂಡಿಸುವವರಿಗೆ ಪಾಠ ಕಲಿಸಬೇಕು. ಬಿಡಿಎ ಅಧ್ಯಕ್ಷರು ಇಲ್ಲೇ ಇದ್ದಾರೆ, ಅರ್ಜಿ ಹಾಕಿ, ಎಲ್ಲಾದರೂ ಅಗತ್ಯ ಜಾಗ ನೀಡುತ್ತೇವೆ ಎಂದು ಹೇಳಿದರು.
ಈ ವರ್ಷ ಬದುಕಿನಲ್ಲಿ ಸಾಧನೆ ಮಾಡಿದವರಿಗೆ ಇಂದು ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಪುರಸ್ಕೃತರಿಗೆ ವೈಯಕ್ತಿಕವಾಗಿ ಹಾಗೂ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ಅಭಿನಂದನೆ ಸಲ್ಲಬೇಕು. ಇಂದು ನಿಮಗೆ ಸನ್ಮಾನ ಮಾಡಲಾಗಿದೆ. ಈ ಹಾರ ಬಹಳ ಭಾರ. ಈ ಸನ್ಮಾನದಿಂದ ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚುತ್ತದೆ. ನನಗೆ ಮಾಧ್ಯಮ ಎಂದರೆ ಸ್ವಲ್ಪ ಅಲರ್ಜಿ. ಆದರೂ ನಾನು ನಿಮ್ಮನ್ನು ಬಿಡುವ ಹಾಗಿಲ್ಲ, ನೀವು ನನ್ನನ್ನು ಬಿಡುವ ಹಾಗಿಲ್ಲ. ದಿನ ಬೆಳಗಾದರೆ ನನ್ನ ಮನೆ ಬಳಿಯೇ ಬಂದು ಮೈಕ್ ಅನ್ನು ನನ್ನ ಮುಖಕ್ಕೆ ತಂದು ಇಡುತ್ತಾರೆ ಎಂದು ಹೇಳಿದರು.
ಇಲ್ಲಿ ಪ್ರಶಸ್ತಿ ಪುರಸ್ಕೃತರಲ್ಲಿ ಮಹಿಳೆಯರು ಇಲ್ಲ. ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. ಸಮಾಜದಲ್ಲಿ ಸೇವೆ ಮಾಡಿದ ಮಹಿಳೆಯರು ಇದ್ದಾರೆ. ನಾವು ಮಹಿಳಾ ಸಬಲೀಕರಣ ಮಾಡಬೇಕು. ಸದ್ಯದಲ್ಲೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಬರಲಿದ್ದು, ಮಾಧ್ಯಮಗಳು ಬಹಳ ಸವಾಲು ಎದುರಿಸುತ್ತಿವೆ. ಮುಂದೆ ಎಐನಿಂದ ಏನೆಲ್ಲಾ ಸಮಸ್ಯೆ ಬರುತ್ತದೆಯೋ ಗೊತ್ತಿಲ್ಲ ಎಂದರು.
ಈ ವೇಳೆ ವೇದನೆ ಇಲ್ಲದೆ ಸಾಧನೆ ಮಾಡಲು ಸಾಧ್ಯವಿಲ್ಲ. ಶ್ರಮ ಇಲ್ಲದೆ ಫಲ ಇರುವುದಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಮಾಧ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಲಾಗಿದೆ. ನಾನು ಒಮ್ಮೆ ತಮಿಳುನಾಡಿನ ಮಾಜಿ ರಾಜ್ಯಪಾಲರನ್ನು ಭೇಟಿ ಮಾಡಿದ್ದೆ, ಆಗ ಅವರು ಜಯಲಲಿತ ಅವರು ಜೈಲಿಗೆ ಹೋಗಿ ಒಂದೂವರೇ ತಿಂಗಳಾದರೂ ಒಬ್ಬರೂ ಅವರ ಬಗ್ಗೆ ಬರೆದಿಲ್ಲ. ಎಲ್ಲರು ಅವರಿಗೆ ಹೆದರುತ್ತಾರೆ ಆದರೆ ನೀವು ನಮ್ಮ ಬಗ್ಗೆ ಏನೇ ಬರೆದರೂ ನಮ್ಮನ್ನು ತಿದ್ದಲು ಬರೆಯುತ್ತಿದ್ದೀರಿ ಎಂದು ಭಾವಿಸುತ್ತೇವೆ ಎಂದು ತಿಳಿಸಿದರು.
ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗ. ರಾಜಕೀಯದಲ್ಲಿ ಯಾವುದೇ ನಾಯಕರು 30-40 ವರ್ಷ ಕಷ್ಟ ಪಟ್ಟು ಬೆಳೆದಿರುತ್ತಾರೆ. ಯಾವುದೋ ಒಂದು ವಿಷಯದಲ್ಲಿ ಅವರನ್ನು ಬಡಿದು ಹಾಕಬೇಡಿ. ಅವರನ್ನು ತಿದ್ದಿ, ಆದರೆ ಅವರ ಭವಿಷ್ಯವನ್ನೇ ಹಾಳು ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.



