Wednesday, July 15, 2026
Google search engine

Homeರಾಜ್ಯಒಂದು ವರ್ಷವಾದರೂ ಮುಗಿಯದ ವೈಟ್ ಟಾಪಿಂಗ್ ಕಾಮಗಾರಿ : ಡಾ.ರಾಜ್‌ಕುಮಾರ್ ರಸ್ತೆಯ ವರ್ತಕರ ಆಕ್ರೋಶ

ಒಂದು ವರ್ಷವಾದರೂ ಮುಗಿಯದ ವೈಟ್ ಟಾಪಿಂಗ್ ಕಾಮಗಾರಿ : ಡಾ.ರಾಜ್‌ಕುಮಾರ್ ರಸ್ತೆಯ ವರ್ತಕರ ಆಕ್ರೋಶ

ಬೆಂಗಳೂರು : ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ವಿಳಂಬದಿಂದಾಗಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಂದು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ರಸ್ತೆ ಸಮಸ್ಯೆಯಿಂದ ನಮ್ಮ ವ್ಯಾಪಾರ ಕುಸಿದಿದೆ. ತೆರಿಗೆ ಕಟ್ಟುವ ನಮಗೆ ಈ ನಷ್ಟಕ್ಕೆ ಪರಿಹಾರ ಯಾರು ಕೊಡುತ್ತಾರೆ? ಎಂದು ರಸ್ತೆ ಬದಿಯ ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಿಂದ ಪ್ರಸನ್ನ ಥಿಯೇಟರ್‌ವರೆಗೆ ಇರುವ ಈ ರಸ್ತೆಯಲ್ಲಿ ಆಸ್ಪತ್ರೆಗಳು, ಮಾಲ್‌ಗಳು, ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಐಟಿ ಕಂಪನಿಗಳು, ಬ್ಯಾಂಕ್‌ಗಳು, ಮಾಧ್ಯಮ ಕಚೇರಿಗಳು ಸೇರಿದಂತೆ ಸಾವಿರಾರು ವಾಣಿಜ್ಯ ಸಂಸ್ಥೆಗಳಿವೆ. ಆದರೆ ಕಾಮಗಾರಿ ವಿಳಂಬದಿಂದ ವ್ಯಾಪಾರ ವಹಿವಾಟು ಕುಸಿದಿದೆ ಎಂದು ವರ್ತಕರು ಆರೋಪಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು, ಗ್ರಾಹಕರ ಓಡಾಟ ಕಡಿಮೆಯಾಗಿದೆ. ಇದರಿಂದ ಹಲವು ವ್ಯಾಪಾರಿಗಳು ಅಂಗಡಿಗಳನ್ನು ಸ್ಥಳಾಂತರಿಸಿದ್ದಾರೆ. ಇನ್ನೂ ಹಲವರು ಬೇರೆಡೆಗೆ ತೆರಳುವ ಚಿಂತನೆಯಲ್ಲಿದ್ದಾರೆ. ಹಲವು ವಾಣಿಜ್ಯ ಕಟ್ಟಡಗಳು ಗ್ರಾಹಕರಿಲ್ಲದೆ ಖಾಲಿ ಇರುವಂತಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಅಲ್ಲದೆ ಈ ರಸ್ತೆಯಲ್ಲಿ ಹಲವು ಆಸ್ಪತ್ರೆಗಳು ಮತ್ತು ಡಯಾಗ್ನಸ್ಟಿಕ್ ಸೆಂಟರ್‌ಗಳಿರುವುದರಿಂದ ಪ್ರತಿದಿನ ಆಂಬುಲೆನ್ಸ್‌ಗಳು ಸಂಚರಿಸಬೇಕಾಗುತ್ತದೆ. ಆದರೆ ಕಾಮಗಾರಿ ಅವ್ಯವಸ್ಥೆಯಿಂದ ರೋಗಿಗಳನ್ನು ಕರೆತರುವುದು ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಫುಟ್‌ಪಾತ್ ಕಾಮಗಾರಿ ಬಾಕಿ, ಜನರಿಗೆ ತೊಂದರೆ : ನವರಂಗ್ ವೃತ್ತದಿಂದ ಸುಜಾತ ವೃತ್ತದ ಸಿಗ್ನಲ್‌ವರೆಗೆ ಕಳೆದ ಜೂನ್‌ನಿಂದ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದರೂ, ಫುಟ್‌ಪಾತ್ ಹಾಗೂ ಪೈಪ್‌ಲೈನ್ ಕಾಮಗಾರಿಗಳು ಇನ್ನೂ ಮುಗಿದಿಲ್ಲ. ಫುಟ್‌ಪಾತ್‌ಗಳಲ್ಲಿ ಓಡಾಡಲು ಸಾಧ್ಯವಾಗದೆ ಸಾರ್ವಜನಿಕರು ಪರದಾಡುತ್ತಿದ್ದು, ಕೆಲವರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಮಗಾರಿ ವಿಳಂಬಕ್ಕೆ ಸಿಬ್ಬಂದಿ ವಿವಿಧ ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ವರ್ತಕರು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.


RELATED ARTICLES
- Advertisment -
Google search engine

Most Popular