ದಾವಣಗೆರೆ : ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶುಕ್ರವಾರ ಚುನಾವಣಾ ಉಸ್ತುವಾರಿ ಸಮಿತಿ ಸಭೆ ಇದೆ. ಬಹುತೇಕ ಶನಿವಾರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗುವ ನಿರೀಕ್ಷೆ ಇದೆ ಎಂದರು.
ಬಿಜೆಪಿಯಿಂದ ಟಿಕೆಟ್ ಘೋಷಣೆಯಾಗಿದ್ದು, ಬಿಜೆಪಿಯ ಶ್ರೀನಿವಾಸ ದಾಸಕರಿಯಪ್ಪ ಸಹ ಒಳ್ಳೆಯ ಸ್ನೇಹಿತ. ನಗುನಗುತ್ತಾ ಚುನಾವಣೆ ಮಾಡೋಣ. ದಾವಣಗೆರೆ ಜನತೆಗೆ ಅಭಿವೃದ್ಧಿ ಕಾರ್ಯಕ್ರಮ ನೀಡೋಣ ಎಂದ ಅವರು ಎದುರಾಳಿ ಪಕ್ಷ ಬಿಜೆಪಿಯ ಅಭ್ಯರ್ಥಿ ಶ್ರೀನಿವಾಸಗೆ ಅವರು ಅಭಿನಂದಿಸಿದರು.
ನಮ್ಮ ಅಭ್ಯರ್ಥಿ ಯಾರೇ ಆದರೂ, ಗೆಲ್ಲಿಸುವ ಕೆಲಸ ಮಾಡುತ್ತೇವೆ. ನಿಮ್ಮ ಯಾವುದೇ ನಿರ್ಣಯಕ್ಕೆ ನಾನು ಬದ್ಧ ಎಂಬುದಾಗಿ ಪಕ್ಷಕ್ಕೂ ತಿಳಿಸಿದ್ದೇನೆ. ಕೆಪಿಸಿಸಿ ಚುನಾವಣಾ ಉಸ್ತುವಾರಿ ಸಮಿತಿ ಸಭೆ ವೇಳೆ ಸೇರಿದ್ದವರಲ್ಲಿ ಜನತಾದಳದಿಂದ ಬಂದವರು ಸಾಕಷ್ಟು ಜನರಿದ್ದಾರೆ. ಹೊಸ ಮುಖಗಳು ಇದ್ದವು. ಮೊದಲು ಹಿಂದೆ ನಿಂತುಕೊಂಡು ಮಾತನಾಡುತ್ತಿದ್ದರು. ಈಗ ಮುಂದೆ ಬಂದಿದ್ದಾರಷ್ಟೇ ಎಂದು ಹೇಳಿದರು.
ಇನ್ನೂ ಉಸ್ತುವಾರಿ ಸಮಿತಿ ಸಭೆಗೆ ಬಂದು ಗಲಾಟೆ, ಗೊಂದಲ ಮಾಡಿದವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಗಲಾಟೆ, ಗೊಂದಲ ಮಾಡಿದವರನ್ನು ನಾವು ಪಕ್ಷದಲ್ಲಿ ಯಾವತ್ತೂ ನೋಡಿಲ್ಲ. ನಮಗೂ ಹೊಸ ಮುಖಗಳಾಗಿವೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳೂ ಇಲ್ಲ. ಪಕ್ಷ ಯಾರಿಗೆ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತದೋ, ಅದಕ್ಕೆ ನಾವೂ ಬದ್ಧ. ಕಾಂಗ್ರೆಸ್ ಪಕ್ಷದ ಗೆಲುವೇ ನಮ್ಮ ಗುರಿ ಎಂದರಲ್ಲದೆ, ದಕ್ಷಿಣ ಕ್ಷೇತ್ರದಲ್ಲಿ ಎಲ್ಲರನ್ನೂ, ಎಲ್ಲ ಜಾತಿ, ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕೆಲಸ ಮಾಡುತ್ತೇವೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ದಕ್ಷಿಣ ಕ್ಷೇತ್ರದಲ್ಲಿ ಆಗಿದೆ.
ಆದರೆ, ಅಭಿವೃದ್ಧಿ ಕೆಲಸಗಳಾಗಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಅಲ್ಪಸಂಖ್ಯಾತರ ಸಮುದಾಯಕ್ಕೆ ಟಿಕೆಟ್ ಕೇಳುತ್ತಿದ್ದಾರೆ. ಟಿಕೆಟ್ ಕೊಟ್ಟರೂ ಸಂದೋಷ, ಕೊಡದಿದ್ದರೂ ಸಂತೋಷ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಮನೂರು ಮತ್ತು ಯಡಿಯೂರಪ್ಪ ಕುಟುಂಬದ ಅಡ್ಜೆಸ್ಟ್ಮೆಂಟ್ ಪಾಲಿಟಿಕ್ಸ್ ಎಂಬುದಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಕುರಿತಂತೆ ನಗುತ್ತಲೇ ಪ್ರತಿಕ್ರಿಯಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಅವರ ಹೊಂದಾಣಿಕೆ ರಾಜಕೀಯದ ಬಗ್ಗೆ ನಾವೇನೂ ಹೇಳುವುದು ಇಲ್ಲ. ಅಂತಹ ಆರೋಪದ ಬಗ್ಗೆ ಯತ್ನಾಳ್ರನ್ನೇ ನೀವು ಕೇಳಿ ಎಂದು ಎಸ್ಎಸ್ಎಂ ಪ್ರತಿಕ್ರಿಯಿಸಿದರು.
ವಸತಿ ಸಚಿವ ಜಮೀರ್ ಅಹಮ್ಮದ್ಗೆ ನಾನು ಏಕವಚನದಲ್ಲಿ ಮಾತನಾಡಿದ್ದು, ಅದು ದಾವಣಗೆರೆಯ ಜವಾರಿ ಭಾಷೆ. ಈಗ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ಗೂ ಏಕವಚನದಲ್ಲಿ ಮಾತನಾಡಿದೆ. ಯತ್ನಾಳ್ ಮೊನ್ನೆ ಮಗನ ಮದುವೆಗೆ ಕರೆದಿದ್ದರು. ರಾಜಕೀಯವೇ ಬೇರೆ, ಸ್ನೇಹವೇ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಶ್ನೆಯೊಂದಕ್ಕೆ ಸಮಾಧಾನದಿಂದ ಉತ್ತರಿಸಿದರು.



