ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತಂದು ಕೊಡುವುದಕ್ಕೆ ವಿರೋಧಿಸಿದ ಪತ್ನಿಯನ್ನು ಕೊಂದು ಮಂಚದ ಕೆಳಗೆ ಶವ ಇಟ್ಟು, ಪತಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಪತಿಗಾಗಿ ಹುಡುಕಾಟ:
ಮೂಡಲಗಿ ತಾಲೂಕಿನ ಕಮಲದಿನ್ನಿಯ ನಿವಾಸಿ ಆಕಾಶ ಕುಂಬಾರ ಎಂಬಾತನೇ ತನ್ನ ಪತ್ನಿಯನ್ನು ಕೊಲೆಗೈದಿರುವ ಆರೋಪಿ. ಸಾಕ್ಷಿ ಆಕಾಶ ಕುಂಬಾರ(20) ಕೊಲೆಯಾಗಿರುವರು. ಸದ್ಯ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಾರಿಯಾಗಿರುವ ಪತಿಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಮದುವೆ:
ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಆಕಾಶ ಜೊತೆಗೆ ಸಾಕ್ಷಿ ಮದುವೆಯಾಗಿತ್ತು. ಮದುವೆಯ ನಂತರ ತವರಿನಿಂದ ಮತ್ತಷ್ಟು ವರದಕ್ಷಿಣೆ ತರುವಂತೆ ಆಕಾಶ ಪೀಡಿಸುತ್ತಿದ್ದ ಎನ್ನಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಕೊಲೆ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪತಿ ಪರಾರಿಯಾಗಿದ್ದಾನೆ. ಇತ್ತ ಮುಂಬೈಗೆ ಹೋಗಿದ್ದ ಅತ್ತೆ ಮರಳಿ ಮನೆಗೆ ಬಂದಾಗ ಕೃತ್ಯ ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ತಹಶಿಲ್ದಾರ್ ಶ್ರೀಶೈಲ್ ಗುಡಮೆ ಅವರು ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.