ಗುವಾಹಟಿ : ದಕ್ಷಿಣ ಆಫ್ರಿಕಾ ವಿರುದ್ಧ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿಗೆ ತುತ್ತಾದ ಬೆನ್ನಲ್ಲೇ ಗೌತಮ್ ಗಂಭೀರ್ ಅವರು ಮುಖ್ಯಕೋಚ್ ಕೋಚ್ ಹುದ್ದೆ ತೊರೆಯುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಸುದ್ದಿಗೋಷ್ಠಿಯಲ್ಲಿ ಗಂಭೀರ್ ನೀಡಿದ ಹೇಳಿಕೆ ಪುಷ್ಠಿ ನೀಡಿದಂತಿದೆ. 2ನೇ ಟೆಸ್ಟ್ ಪಂದ್ಯ ಸೋಲಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ನಾನು ಮುಖ್ಯವಲ್ಲ ಭಾರತೀಯ ಕ್ರಿಕೆಟ್ ಮುಖ್ಯ ಎಂದು ಹೇಳಿದ್ದಾರೆ.
ಇನ್ನೂ ಟೆಸ್ಟ್ ಕ್ರಿಕೆಟ್ ನಲ್ಲಿ ಈ ಹುದ್ದೆಗೆ ನೀವು ಸರಿಯಾದ ವ್ಯಕ್ತಿ ಅಂತ ಭಾವಿಸುತ್ತೀರಾ? ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ನನ್ನ ಭವಿಷ್ಯ ನಿರ್ಧರಿಸೋದು ಬಿಸಿಸಿಐಗೆ ಬಿಟ್ಟಿದ್ದು, ಆದರೆ ಇಂಗ್ಲೆಂಡ್ ನಲ್ಲಿ ಫಲಿತಾಂಶ ತಂದುಕೊಟ್ಟ, ಚಾಂಪಿಯನ್ಸ್ ಟ್ರೋಫಿಗೆ ಕೋಚ್ ಆಗಿದ್ದ ಅದೇ ವ್ಯಕ್ತಿ ನಾನು ಎನ್ನುವುದನ್ನು ನೆನಪಿನಲ್ಲಿಡಿ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.
ಇದೇ ವರ್ಷ ನಡೆದ ಇಂಗ್ಲೆಂಡ್ ಟೆಸ್ಟ್ ಸಿರೀಸ್ ನ್ನು 2-2 ರಲ್ಲಿ ಭಾರತ ಡ್ರಾ ಮಾಡಿಕೊಂಡಿತ್ತು. ಅಲ್ಲದೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೂ ಪಂದ್ಯ ಸೋಲದೇ ಪಟ್ಟ ಅಲಂಕರಿಸಿತ್ತು.ನಾವು ಇನ್ನೂ ಉತ್ತಮವಾಗಿ ಕ್ರಿಕೆಟ್ ಆಡಬೇಕಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ ಆಡಲು ಅಬ್ಬರಿಸುವ, ಪ್ರತಿಭಾನ್ವಿತ ಕ್ರಿಕೆಟಿಗರ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಸೀಮಿತ ಕೌಶಲ್ಯ ಹೊಂದಿರುವ ಕಠಿಣ ಪಾತ್ರಗಳು. ಅವರು ಉತ್ತಮ ಟೆಸ್ಟ್ ಕ್ರಿಕೆಟಿಗರಾಗುತ್ತಾರೆ ಎಂದರು.
95ಕ್ಕೆ 1 ವಿಕೆಟ್ ಇತ್ತು. ಅದೇ 127 ರನ್ ಗಳಿಗೆ 7 ವಿಕೆಟ್ ಹೋಗಿತ್ತು, ಇದು ಸ್ವೀಕಾರಾರ್ಹವಲ್ಲ. ಇದಕ್ಕಾಗಿ ನಾನು ಯಾರನ್ನೂ ದೂಷಿಸಲ್ಲ. ಜೊತೆಗೆ ಮುಂದೆ ಈ ತಪ್ಪು ಮಾಡುವುದಿಲ್ಲ ಎಂದು ತಿಳಿಸಿದರು.



