ಬೆಂಗಳೂರು: ನಾನು ಪಕ್ಷ ಬಿಡುವುದಿಲ್ಲ. ಬಿಜೆಪಿಯಲ್ಲೇ ಇದ್ದು ಶುದ್ದೀಕರಣದ ಕಡೆಗೆ ನಾನು ಗಮನ ನೀಡುತ್ತೇನೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಡಿವಿಎಸ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಒಂದು ಸುದ್ದಿ ಹರಡಿತ್ತು. ಈ ಸುದ್ದಿಯ ಬೆನ್ನಲ್ಲೇ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಬಿಜೆಪಿಯನ್ನು ಬಿಡುವುದಿಲ್ಲ. ಕಾಂಗ್ರೆಸ್‌ನಿಂದ ಆಹ್ವಾನ ಬಂದಿದ್ದು ನಿಜ. ಆದರೆ ನಾನು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಮೋದಿ ಪರ ವಾತಾವರಣ ಸೃಷ್ಟಿಯಾಗಬೇಕು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಇದಕ್ಕಾಗಿ ಬಿಜೆಪಿ ಜನಪರವಾದ ಪಕ್ಷ ಆಗಬೇಕು, ಜನ ಒಪ್ಪಿಕೊಳ್ಳಬಲ್ಲ ಪಕ್ಷ ಆಗಬೇಕು ಎಂದರು.
ಮೋದಿ ಅವರು ಹೇಳಿದಂತಹ ಪರಿವಾರವಾದ, ಮೋದಿ ಅವರು ಹೇಳಿದಂತಹ ಭ್ರಷ್ಟಾಚಾರವಾದ, ಮೋದಿ ಅವರು ಹೇಳಿದಂತಹ ಜಾತಿವಾದ ಕರ್ನಾಟಕದಲ್ಲಿ ಇರಬಾರದು. ಈ ಶುದ್ದೀಕರಣಕ್ಕೆ ವೇಗ ಕೊಡುವಂತದ್ದು ನನ್ನಿಂದ ಮಾತ್ರ ಸಾಧ್ಯ. ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ನನ್ನ ಮಕ್ಕಳಿಗೆ, ನನ್ನ ಕುಟುಂಬದವರಿಗೆ, ನನ್ನ ಸಂಬಂಧಿಕರಿಗೆ, ನನ್ನ ಚೇಲಾಗಳಿಗೆ ಇರುವಂತಹ ಪಕ್ಷ ಬಿಜೆಪಿಯಾಗಬಾರದು ಎಂದು ಹೇಳಿದರು.