ಮೈಸೂರು: ಸಂವಿಧಾನ ನಮಗೆ ಸಮಾನತೆ ಸ್ವಾತಂತ್ರ್ಯ ಸೋದರತೆ ಎಲ್ಲವನ್ನು ಕೊಟ್ಟಿದೆ, ಆದರೆ ಅದು ಪಾಲನೆಯಾಗಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಿ ಸುಭೀಕ್ಷವಾಗಿರುತ್ತದೆ ಎಂದು ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಲಹೆಗಾರರಾದ ಬಸವರಾಜ್ ದೇವನೂರು ತಿಳಿಸಿದರು.
ನಗರದ ಗಾಂಧಿನಗರದಲ್ಲಿರುವ ಹರಳಯ್ಯ ರಂಗಮಂದಿರದಲ್ಲಿ ರಂಗಾತರಂಗ ತಂಡ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮಕ್ಕಳಿಗೆ ಏರ್ಪಡಿಸಿದ್ದು ಮಕ್ಕಳ ರಂಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಂಡ್ಯದ ಕೆರಗೋಡಿನಲ್ಲಿ ನಡೆಯುತ್ತಿರುವ ಘಟನೆ ಬೇಸರ ತರಿಸಿದೆ. ಯಾವುದೋ ಧ್ವಜವನ್ನು ಸೃಷ್ಠಿಮಾಡಿ ಆ ಮೂಲಕ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಇವರಿಗೆ ದೇಶದ ಧ್ವಜದ ಬಗ್ಗೆ ಚಿಂತೆಯಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯಲು ಏರ್ಪಡಿಸಿರುವ ರಂಗಶಿಬಿರ ಅರ್ಥ ಪೂರ್ಣವಾಗಿದೆ. ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಹೊರತೆಗೆಯುವ ಕೆಲಸವಾಗಬೇಕು. ಪಿ. ಲಂಕೇಶ್ ಅವರು ಬರೆದಿರುವ ಈ ನಾಟಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳಬೇಕು ಎಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಲಹೆಗಾರರಾದ ಡಾ. ಎಸ್. ತುಕಾರಾಂ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ಶಿಕ್ಷಣ ಮತ್ತು ಅರಿವಿಗೆ ಹೆಚ್ಚಾಗಿ ಕೆಲಸ ಮಾಡುತ್ತಿದ್ದು, ನಾವೆಲ್ಲರೂ ಭಾರತೀಯರು ಭಾರತ ಮಾತೆಯ ಮಕ್ಕಳು ಎಂದು ತಿಳಿಯಬೇಕು. ಪ್ರತಿಯೊಬ್ಬರನ್ನು ಮುಟ್ಟುವುದರಲ್ಲಿ ಪ್ರೀತಿಯಿದೆ. ಜಾತಿಯನ್ನು ಮರೆತು ಮುಟ್ಟಬೇಕು. ಎಲ್ಲರನ್ನು ಮುಟ್ಟುವ ಮೂಲಕ ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಬರಬೇಕು. ಈ ನಾಟಕ ಭಾರತದ ಎಲ್ಲಾ ಜನತೆಯನ್ನು ತಲುಪಬೇಕು ಎಂದರು.
ಸಮಾರಂಭದಲ್ಲಿ ಆದಿಜಾಂಬವ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಣ್ಣ ಕಾರ್ಯದರ್ಶಿ ಕೃಷ್ಣ, ಅನಂತಸ್ವಾಮಿ ಮುಖ್ಯಶಿಕ್ಷಕ, ಪ್ರದೀಪ್ ಕುಮಾರ್, ರವಿಕುಮಾರ್ ಹಾಜರಿದ್ದರು. ಕೀರ್ತಿರಾಜ್ ತಂಡದಿಂದ ಮುಟ್ಟಿಸಿಕೊಂಡವರು ನಾಟಕ ಪ್ರದರ್ಶನ ನಡೆಯಿತು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು