ವರದಿ: ಸ್ಟೀಫನ್ ಜೇಮ್ಸ್..
ಬೆಳಗಾವಿ: ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಕೌಟುಂಬಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಸಿ.ಎಂ. ತ್ಯಾಗರಾಜ್ ಅಭಿಪ್ರಾಯಪಟ್ಟರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ ಮತ್ತು ಅಡಿಯಲ್ಲಿ ಹಮ್ಮಿಕೊಳ್ಳಲಾದ “Managing Midlife: A Holistic Approach to Menopause & Valedictory of Soft Component-37” 20 ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, “ಮಧ್ಯವಯಸ್ಕ ಮಹಿಳೆಯರು ತಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಿಯಮಿತ ವ್ಯಾಯಾಮ ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗ ಮತ್ತು ಧ್ಯಾನದಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಹಿಳೆಯರು ತಮ್ಮ
ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕುಟುಂಬದ ಇತರ ಸದಸ್ಯರ ಆರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ಮಧ್ಯವಯಸ್ಸಿನಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ, ವಿಶೇಷವಾಗಿ ಕಡಿಮೆಯಾಗುತ್ತಿರುವ ಎಸ್ಪೋಜನ್‌ನಿಂದ ಜೈವಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ಈ ತರನಾದ ಕಾರ್ಯಾಗಾರಗಳು ಮಹಿಳೆಯರ ಆರೋಗ್ಯ ಶಿಕ್ಷಣದಲ್ಲಿ ಒಂದು ಮೈಲುಗಲ್ಲಾಗಲಿವೆ” ಎಂದರು.
ಕುಲಸಚಿವರಾದ ಸಂತೋಷ ಕಾಮಗೌಡ, ಕೆ.ಎ.ಎಸ್ ರವರು ಮಾತನಾಡಿ, “ಮಧ್ಯವಯಸ್ಸಿನ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಥಮ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಮಧ್ಯವಯಸ್ಸಿನ ಮಹಿಳೆಯರು ತಮ್ಮ ಆರೋಗ್ಯಕ್ಕೆ ಸೂಕ್ತ ಒತ್ತು ನೀಡುತ್ತಿಲ್ಲ; ಕಾರಣ ಅವರಲ್ಲಿ ಇರುವ ಅನಕ್ಷರತೆ ಮತ್ತು ಅಜ್ಞಾನಗಳಿಂದ ಮೂಢನಂಬಿಕೆಗಳಿಗೆ ಬಲಿಯಾಗಿದ್ದಾರೆ. ಈ ಅವಧಿಯಲ್ಲಿ ನಿಮಗೆ ಕುಟುಂಬಿಕ ಜವಾಬ್ದಾರಿಗಳೊಂದಿಗೆ ವೃತ್ತಿಪರ
ಸವಾಲುಗಳು ಎದುರಾಗುತ್ತವೆ; ಇವುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿರಿ ಮತ್ತು ಅಗತ್ಯವಿದ್ದಲ್ಲಿ ಮಹಿಳಾ ವೈದ್ಯರ ಸಲಹೆ ಮತ್ತು ಸಮಾಲೋಚನೆಯನ್ನು ಪಡೆದುಕೊಂಡು ಮುಂದುವರೆಯಿರಿ” ಎಂದರು.
ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಡಾ. ಅನಿತಾ ಉಮದಿ ಅವರು ಮಾತನಾಡಿ, “ನಮ್ಮ ಆಸ್ಪತ್ರೆಗೆ ಧಾವಿಸುವ ಮಹಿಳಾ ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಸೂಕ್ತ ಗಮನ ಹರಿಸುತ್ತಿದ್ದೇವೆ. ಅವರ ದೈಹಿಕ ಮತ್ತು ಭಾವನಾತ್ಮಕ
ತೊಂದರೆಗಳನ್ನು ನಿವಾರಿಸಲು ಸೂಕ್ತ ಬೆಂಬಲ ಮತ್ತು ಚಿಕಿತ್ಸೆ ನೀಡುತ್ತಿದ್ದೇವೆ. ಅಲ್ಲದೆ, ಗ್ರಾಮಗಳಿಗೆ ತೆರಳಿ ‘ಅಲ್ಲಿಯೂ ಗ್ರಾಮೀಣ ಮಹಿಳೆಯರಿಗೆ ಮಧ್ಯವಯಸ್ಸಿನಲ್ಲಿ ಉಂಟಾಗುವ ಈ ಮೆನೋಪಾಸ್ ಸಂಬಂಧಿತ ಸಮಸ್ಯೆಗಳು. ಮತ್ತು ಅವುಗಳ ನಿರ್ವಹಣೆಗಾಗಿ ಅಗತ್ಯ ತಿಳುವಳಿಕೆ, ಶಿಕ್ಷಣ ಮತ್ತು ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ” ಎಂದರು.
ಸಂಘಟನಾ ಕಾರ್ಯದರ್ಶಿಯಾದ ಡಾ. ದೇವತಾ ಗಸ್ತಿ ಅವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಡಾ. ಸಿದ್ದಲಿಂಗೇಶ್ವರ ಬಿದರಳ್ಳಿ ಅವರು ವಂದನಾರ್ಪಣೆ ಮಾಡಿದರು ಮತ್ತು ಖುಷಿ ಕಾಂಬಳೆ ಅವರು ನಿರೂಪಿಸಿದರು.
ಕಾರ್ಯಗಾರದಲ್ಲಿ ಸಂಚಾಲಕರಾದ ಪ್ರೊ. ಅಶೋಕ್ ಡಿಸೋಜಾ, ಡಾ. ಮಂಜುಳಾ ಜಿ. ಕೆ., ಡಾ. ನಂದಿನಿ ದೇವರಮನಿ, ಡಾ. ಚಂದ್ರಶೇಖರ್ ಬನಸೋಡೆ, ಡಾ. ಸಂತೋಷ ಪಾಟೀಲ್ ಮತ್ತು ಡಾ. ಸಿದ್ಧಲಿಂಗೇಶ್ವರ ಬಿದರಳ್ಳಿ, ಉಪನ್ಯಾಸಕರಾದ ಶ್ರೀ. ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿಯವರು ಉಪಸ್ಥಿತರಿದ್ದರು.