Wednesday, May 21, 2025
Google search engine

Homeಸ್ಥಳೀಯವಿಶ್ವ ಸ್ತನ್ಯಪಾನ ಸಪ್ತಾಹ : ತಾಯಿ ಎದೆಹಾಲು ಅಮೃತಕ್ಕೆ ಸಮಾನ

ವಿಶ್ವ ಸ್ತನ್ಯಪಾನ ಸಪ್ತಾಹ : ತಾಯಿ ಎದೆಹಾಲು ಅಮೃತಕ್ಕೆ ಸಮಾನ

ಶಿವಮೊಗ್ಗ: ತಾಯಿ ಎದೆ ಹಾಲು ಮಗುವಿಗೆ ಅತ್ಯಂತ ಪೌಷ್ಟಿಕ ಆಹಾರವಾಗಿದ್ದು ಎದೆ ಹಾಲಿನ ಮಹತ್ವ ಮತ್ತು ಎದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿಗೆ ಆಗುವ ಅನುಕೂಲದ ಕುರಿತು ಎಲ್ಲರೂ ತಿಳಿಯಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಹೇಳಿದರು.
ಮೆಗ್ಗಾನ್ ಬೋಧನಾ ಜಿಲ್ಲಾಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ವರ್ಷ ಆಗಸ್ಟ್ 1ನೇ ತಾರೀಕಿನಿಂದ 7 ನೇ ತಾರೀಖಿನವರೆಗೆ ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತದೆ. ಎದೆ ಹಾಲಿನ ಮಹತ್ವ ಮತ್ತು ಎದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿಗೆ ಆಗುವ ಅನುಕೂಲಗಳು ಮತ್ತು ಮಗುವಿನ ಬೆಳವಣಿಗೆಯಲ್ಲಿ ಎದೆ ಹಾಲಿನ ಮಹತ್ವದ ಕುರಿತು ಸವಿವರವಾದ ಮಾಹಿತಿಯನ್ನು ಅವರು ನೀಡಿದರು.
ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸುನೀತ ಮಾತನಾಡಿ, ಎದೆ ಹಾಲುಣಿಸುವಲ್ಲಿ ತಾಯಂದಿರಿಗೆ ಇರುವ ಮಾಹಿತಿಯ ಕೊರತೆ ಮತ್ತು ಸಮಾಜದಲ್ಲಿರುವ ಮೌಢ್ಯತೆ ಹಾಗೂ ಉದಾಸೀನ ಮನೋಭಾವ, ರೂಡಿ ಸಂಪ್ರದಾಯಗಳು ಅಡ್ಡಿಯಾಗಿವೆ. ಎಲ್ಲಾ ತಾಯಂದಿರು ಮತ್ತು ಸಮಾಜದ ಎಲಾ ಜವಾಬ್ದಾರಿಯುತ ನಾಗರಿಕರು, ಅಂಧ ಶ್ರದ್ಧೆಗಳನ್ನು ತೊಡೆದು ಹಾಕಬೇಕು.

ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಹುಟ್ಟಿದ ಒಂದು ಗಂಟೆಯೊಳಗೆ ತಾಯಿ ಎದೆಹಾಲನ್ನು ನೀಡಬೇಕು. ಇದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ತುಂಬಾ ಮುಖ್ಯವಾಗಿದೆ.
ಮತ್ತು ಎದೆ ಹಾಲುಣಿಸುವುದು ತಾಯಿಯ ಹಕ್ಕು. ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಸೌಲಭ್ಯಗಳನ್ನು ನೀಡಿದೆ ಮತ್ತು ನ್ಯಾಯಾಲಯಗಳಲ್ಲಿ ಕೂಡ ಕಾನೂನಿನಡಿಯಲ್ಲಿ ಎದೆ ಹಾಲುಣಿಸುವ ಮಹಿಳೆಗೆ ವಿಶೇಷ ಹಕ್ಕುಗಳನ್ನು ನೀಡಿದೆ ಮತ್ತು ಪ್ರತಿಕಛೇರಿ, ಆಸ್ಪತ್ರೆ ಮತ್ತು ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರತ ಮಹಿಳೆಯರಿಗೆ ಎದೆ ಹಾಲುಣಿಸಲು ಪ್ರತ್ಯೇಕ ಸ್ಥಳಗಳನ್ನು ಮೀಸಲಿರಿಸಲಾಗಿದೆ.

ಕಾರ್ಯನಿರತ ತಾಯಂದಿರು ಇದರ ಸದುಪಯೋಗ ಪಡೆದುಕೊಂಡು ಮಗುವಿಗೆ ಸಂಪೂರ್ಣವಾಗಿ ಕನಿಷ್ಟ 6 ತಿಂಗಳವರೆಗೆ ಕೇವಲ ಎದೆ ಹಾಲು ಮಾತ್ರ ಉಣಿಸಬೇಕು ನಂತರದಲ್ಲಿ ಮೆದುವಾದ ಪೂರಕ ಆಹಾರವನ್ನು ಪ್ರಾರಂಭಿಸಬೇಕು ಮತ್ತು ಎದೆ ಹಾಲುಣಿಸುವಲ್ಲಿ ವಹಿಸಬೇಕಾದ ಕ್ರಮಗಳು ಮತ್ತು ಎದೆ ಹಾಲಿನಿಂದ ಮಗುವಿಗೆ ಸಿಗುವ ರಕ್ಷಣೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಸಿದ್ಧನಗೌಡ ಪಾಟೀಲ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಎದೆಹಾಲಿಗೆ ಸರಿಸಮವಾದ ವಸ್ತು ಯಾವುದೂ ಇಲ್ಲ. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಎದೆಹಾಲುಂಡ ಮಗು ಆರೋಗ್ಯವಾಗಿರುತ್ತದೆ ಮತ್ತು ಮಾನಸಿಕವಾಗಿ ಸದೃಢವಾಗಿರುತ್ತದೆ. ಆದ್ದರಿಂದ ತಾಯಂದಿರು ಮಗುವಿಗೆ ಯಾವುದೇ ಉದಾಸೀನ ಮಾಡದೇ ದಿನಕ್ಕೆ 8 ಬಾರಿ ಎದೆ ಹಾಲುಣಿಸಿ ಬೆಳೆಸುವ ಮೂಲಕ ದೇಶದ ಸದೃಢ ಪ್ರಜೆಯನ್ನಾಗಿ ಮಾಡಬೇಕೆಂದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ನಾಗರಾಜ್ ನಾಯ್ಕ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಸಂಭವಿಸುವ ಮಕ್ಕಳ ಮರಣಕ್ಕೆ ಸಂಬಂಧಿಸಿದ ಕಾರಣಗಳಲ್ಲಿ ಸರಿಯಾದ ಕ್ರಮದಲ್ಲಿ ಮಗುವಿಗೆ ಎದೆ ಹಾಲು ನೀಡದಿರುವುದು, ಹಾಲುಣಿಸುವಾಗ ಮತ್ತು ನಂತರದಲ್ಲಿ ವಹಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ವಹಿಸದಿರುವುದು ಕೂಡಾ ಒಂದಾಗಿದೆ. ಹೊಂದಾಣಿಕೆ ಮತ್ತು ಪರಿಣಾಮಕಾರಿಯಾಗಿ ಮಗು ಎದೆಹಾಲು ಸೇವಿಸುವ ಬಗ್ಗೆ ಹೆಚ್ಚು ಗಮನಹರಿಸಬೇಕು. ಎದೆ ಹಾಲು ನಿಸರ್ಗದ ಅಮೃತವಿದ್ದಂತೆ. ಯಾವುದೇ ಖರ್ಚಿಲ್ಲದೆ, ಪರಿಶುದ್ಧವಾದ ಮತ್ತು ಮಗುವಿಗೆ ಕಾಲಕ್ಕನುಗುಣವಾಗಿ ಬೇಕಾದ ಉಷ್ಣಾಂಶ, ತಾಜಾತನ ಮತ್ತು ಮಾರಕ ರೋಗಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ನೀಡುವ ಏಕೈಕ ವಸ್ತುವೆಂದರೆ ಅದು ಎದೆ ಹಾಲು ಮಾತ್ರ. ಹಾಗಾಗಿ ಎಲ್ಲಾ ತಾಯಂದಿರು ಸರಿಯಾದ ಕ್ರಮದಲ್ಲಿ ಎದೆ ಹಾಲುಣಿಸಬೇಕೆಂದು ಸಲಹೆ ನೀಡಿದರು.
ವೈದ್ಯಕೀಯ ಅಧಿಕ್ಷಕರಾದ ಡಾ. ತಿಮ್ಮಪ್ಪ ಮಾತಾನಾಡಿದರು. ಕಾರ್ಯಕ್ರಮದಲ್ಲಿ ಪಿಡಿಯಾಟ್ರಿಕ್ ವಿಭಾಗದ ಹೆಚ್.ಓ.ಡಿ ಡಾ. ರವೀಂದ್ರ.ಬಿ.ಪಾಟೀಲ್
ಓ.ಬಿ.ಜಿ ವಿಭಾಗದ ಹೆಚ್.ಓ.ಡಿ ಡಾ. ಲೇಪಾಕ್ಷಿ, ಮಕ್ಕಳ ತಜ್ಷ ಡಾ. ಮನೋಜ್, ಐ.ಎ.ಪಿ ಅಧ್ಯಕ್ಷ ಡಾ. ವಿರೇಶ್, ಐಎಪಿ ಯ ಡಾ. ವಿನಾಯಕ್, ಓ.ಬಿ.ಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಚಂದ್ರಶೇಖರ್, ನವಜಾತ ಶಿಶು ತಜ್ಞ ಡಾ. ವೇಣುಗೋಪಾಲ್, ನರ್ಸಿಂಗ್ ಅಧೀಕ್ಷಕಿ ಅನ್ನಪೂರ್ಣ, ಶುಶ್ರೂಷಾಧಿಕಾರಿ ಜಯಲಕ್ಷ್ಮಿ, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಇತರೆ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular