ಮೈಸೂರು: ಕಾರ್ಮಿಕರು ದೇಶದ ಬೆನ್ನೆಲುಬಾಗಿದ್ದು, ಅವರ ಕೊಡುಗೆಗಳು ಗೌರವಕ್ಕೆ ಅರ್ಹವಾಗಿವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಮೈಸೂರಿನ ಈಗಲ್‌ಬರ್ಗ್ ಗಾಲ್ಫ್ ಮೈದಾನದಲ್ಲಿ ಲೆಜೆಂಡ್ಸ್ ತಂಡದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಗಾಲ್ಫ್ ಕ್ಲಬ್‌ನ ಮೊದಲ ಸ್ವಿಂಗ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗಾಲ್ಫ್ ಕ್ಲಬ್ ಆವರಣದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾರ್ಮಿಕರನ್ನು ಸನ್ಮಾನಿಸಿ, ಅವರ ಪರಿಶ್ರಮ ಮತ್ತು ನಿಷ್ಠೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಒಡೆಯರ್, ರೈತರು ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತಿದ್ದರೂ, ಎಲ್ಲಾ ಕ್ಷೇತ್ರಗಳ ಕಾರ್ಮಿಕರೂ ಸಮಾನವಾಗಿ ಮುಖ್ಯರಾಗಿದ್ದಾರೆ. ಏಕೆಂದರೆ ಅವರಿಲ್ಲದೆ ಯಾವುದೇ ಉದ್ಯಮವು ಯಶಸ್ವಿಯಾಗಿ ನಡೆಯಲು ಸಾಧ್ಯವಿಲ್ಲ ಎಂದರು.
ಕಾರ್ಮಿಕರ ಕುಟುಂಬಗಳು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶ್ರಮ ಮತ್ತು ಅವಕಾಶಗಳ ಮೂಲಕ ಕಾರ್ಮಿಕರ ಮಕ್ಕಳು ಕೂಡ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಬೆಳೆದು ದೇಶದ ಅಭಿವೃದ್ಧಿಗೆ ಜವಾಬ್ದಾರಿಯುತ ನಾಗರಿಕರಾಗಿ ಸೇವೆ ಸಲ್ಲಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೆಜೆಂಡ್ಸ್ ತಂಡದ ಆಯೋಜಕರಾದ ಎಂ.ಆರ್. ಸೂರ್ಯ ಕುಮಾರ್, ಬಿ.ಪಿ.ಮಂಜುನಾಥ್, ಕೆ.ಎ.ಅನಿಲ್ ಕುಮಾರ್ , ಎಸ್.ಕೆ ಶ್ರೀನಿವಾಸ್, ಕೆ.ಕೆ.ನಂದನ್, ಕೆ.ಕೆ.ನವೀನ್, ಟಿ.ಎನ್. ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



