ಬೆಂಗಳೂರು : ನಟ ರಾಕಿಂಗ್ ಯಶ್ ಅವರಿಗೆ ಜನವರಿ 8ರಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ಕೂಡ ಅವರು ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಲು ಸಾಧ್ಯವಾಗುತ್ತಿಲ್ಲ. ಒಂದು ದಿನ ಮೊದಲೇ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ‘ನನ್ನ ಪ್ರೀತಿಯ ಅಭಿಮಾನಿಗಳೇ, ನಿಜ ಹೇಳಬೇಕೆಂದರೆ, ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಎಷ್ಟು ಕಾಯುತ್ತಿದ್ದೀರಿ ಎಂದು ನನಗೆ ಚೆನ್ನಾಗಿ ತಿಳಿದಿದೆ. ನನ್ನನ್ನು ನಂಬಿರಿ, ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆ’ ಎಂದು ಯಶ್ ಅವರು ಬರಹ ಆರಂಭಿಸಿದ್ದಾರೆ.
‘ಈ ವರ್ಷ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ಭೇಟಿಯಾಗಲು ನಾನು ನಿಜವಾಗಿಯೂ ಬಯಸಿದ್ದೆ. ಆದರೆ 2026ರ ಮಾರ್ಚ್ 19ರಂದು ನಿಮಗಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಲುವಾಗಿ ನಾನು ಈ ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದೇನೆ. ಈ ಕಾರಣದಿಂದಾಗಿ ನಾನು ಈಗ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ’ ಎಂದು ಯಶ್ ಹೇಳಿದ್ದಾರೆ.
‘ನಾವು ಈಗ ಭೇಟಿಯಾಗಲು ಸಾಧ್ಯವಾಗದಿದ್ದರೂ, ನಾವು ಶೀಘ್ರದಲ್ಲೇ ಇನ್ನೂ ದೊಡ್ಡ ರೀತಿಯಲ್ಲಿ ಭೇಟಿಯಾಗುತ್ತೇವೆ ಎಂದು ಭರವಸೆ ನೀಡುತ್ತೇನೆ. ಈ ಮಧ್ಯೆ, ನಿಮ್ಮೆಲ್ಲರ ಶುಭಾಶಯಗಳನ್ನು ನಾನು ವೈಯಕ್ತಿಕವಾಗಿ ಪರಿಶೀಲಿಸುತ್ತೇನೆ ಮತ್ತು ನೀವು ಕಳುಹಿಸುವ ಪ್ರೀತಿಯನ್ನು ಸ್ವೀಕರಿಸುವೆ’ ಎಂದು ಯಶ್ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಅವರಿಗೆ ಈಗ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಭಾರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಯಶ್ ಜನ್ಮದಿನದ ಪ್ರಯುಕ್ತ ಈ ಚಿತ್ರತಂಡದಿಂದ ಅಪ್ಡೇಟ್ ಸಿಗಲಿದೆ. ಅದಕ್ಕಾಗಿ ಕಾತರ ಹೆಚ್ಚಾಗಿದೆ.
ಗೀತು ಮೋಹನ್ದಾಸ್ ಅವರು ‘ಟಾಕ್ಸಿಕ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಜೊತೆ ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ನಯನತಾರಾ, ಕಿಯಾರಾ ಅಡ್ವಾಣಿ ಮುಂತಾದವರು ನಟಿಸುತ್ತಿದ್ದಾರೆ. ನಟಿಯರ ಫಸ್ಟ್ ಲುಕ್ ಪೋಸ್ಟರ್ಗಳು ಈಗಾಗಲೇ ಬಿಡುಗಡೆ ಆಗಿವೆ. ಈಗ ಯಶ್ ಪಾತ್ರದ ಬಗ್ಗೆ ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.



