ಬೆಂಗಳೂರು : ನಾಯಕತ್ವದ ಬದಲಾವಣೆ, ಕುರ್ಚಿ ಕಾದಾಟದ ಕಿಚ್ಚು ತಣ್ಣಗಾಗಿದೆ, ಆದರೆ ಚರ್ಚೆ ನಿಂತಿಲ್ಲ. ಅಲ್ಲದೇ ಸಿಎಂ ಹಾಗೂ ಡಿಸಿಎಂ ಪರ ಬ್ಯಾಟಿಂಗ್ ಮುಂದುವರಿದಿದೆ. ಚಳಿಗಾಲದ ಅಧಿವೇಶ ಕಾವೇರುವ ಹೊತ್ತಲ್ಲೇ ಸಿಎಂ ಪುತ್ರ ಯತೀಂದ್ರ ಹಾಗೂ ಡಿಸಿಎಂ ಸಹೋದರ ಡಿಕೆ ಸುರೇಶ್ ಮಾರ್ಮಿಕ ಮಾತುಗಳನ್ನು ಹಾಡಿದ್ದು, ಮತ್ತೆ ಕುರ್ಚಿ ಚರ್ಚೆ ಜೋರಾಗುವ ಲಕ್ಷಣ ಕಾಣುತ್ತಿದೆ ಎನ್ನಲಾಗುತ್ತಿದೆ. ಇನ್ನೂ ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತಾಡಿದ ಯತೀಂದ್ರ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದಿದ್ದು, ಇತ್ತ ಸುರೇಶ್ ಪ್ರಯತ್ನ ಫಲ ಕೊಡುವ ನಿರೀಕ್ಷೆಯಲ್ಲಿ ಮಾತಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಕುರ್ಚಿ ಚರ್ಚೆ ಮುನ್ನಲೆಗೆ ಬಂದಾಗಿನಿಂದಲೂ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವದ ಬದಲಾವಣೆ ಆಗಲ್ಲ ಎನ್ನುತ್ತಿದ್ದು, ಇದೀಗ ನಮ್ಮ ತಂದೆಯೇ 5 ವರ್ಷ ಅಧಿಕಾರ ಪೂರೈಸ್ತಾರೆ ಎಂದಿದ್ದಾರೆ. ಅಲ್ಲದೇ ಸಿಎಂ ಚೆನ್ನಾಗಿ ಆಡಳಿತ ನಡೆಸುತ್ತಿದ್ದಾರೆ ನಾಯಕತ್ವ ಬದಲಾವಣೆಯ ಅಗತ್ಯವಿಲ್ಲ ಎಂದಿದ್ದಾರೆ.
ಅಲ್ಲದೇ ಸದನದಲ್ಲಿ ಅರ್ಥಪೂರ್ಣ ಚರ್ಚೆಯಾಗೋದು ವಿಪಕ್ಷಗಳ ಕೈಯಲ್ಲಿದೆ ಎಂದ ಯತೀಂದ್ರ ಅವರು, ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಬದಲಾವಣೆ ಅಂತ ಹೇಳ್ತಾನೆ ಇದ್ದಾರೆ. ಮುಡಾ ಕೇಸ್‌ನಲ್ಲಿ ರಾಜೀನಾಮೆ ಅಂದ್ರು. ಲೋಕಸಭೆ ಬಳಿಕ ರಾಜೀನಾಮೆ ಅಂದ್ರು. ಹೇಳೋರೆಲ್ಲಾ ಸಿಎಂ ರಾಜೀನಾಮೆ ಕೊಡುತ್ತಾರೆ ಅಂತ ಕನಸು ಕಾಣುತ್ತಾ ಕೂರಲಿ. ನನಗೆ ನಂಬಿಕೆ ಇದೆ, ಅವರು ಐದು ವರ್ಷ ಅಧಿಕಾರ ಪೂರೈಸುತ್ತಾರೆ ಎಂದು ಯತೀಂದ್ರ ಹೇಳಿದ್ದಾರೆ.
ಇನ್ನೂ ಕೆ.ಸಿ.ವೇಣುಗೋಪಾಲ್ ಈ ಬಗ್ಗೆ ಫ್ಯಾಕ್ಟ್ ಹೇಳಿದ್ದಾರೆ. ಹೈಕಮಾಂಡ್ ಸಭೆಯಲ್ಲಿ ಬೇರೆ ಬೇರೆ ವಿಚಾರ ಚರ್ಚೆ ಆಗಿದೆ. ಅದರ ಭಾಗವಾಗಿ ಕರ್ನಾಟಕ ವಿಚಾರ ಕೂಡ ಚರ್ಚೆ ಆಗಿದ್ದು. ನನಗೆ ಗೊತ್ತಿರುವ ಪ್ರಕಾರ ಸಿಎಂ, ಡಿಸಿಎಂನ ಹೈಕಮಾಂಡ್ ಕರೆದಿಲ್ಲ. ಕರೆದ್ರೆ ದೆಹಲಿಗೆ ಹೋಗುತ್ತಾರೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಅತ್ತ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಗೆಲುವಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದು, ಪ್ರಯತ್ನ ಮಾಡ್ತಿದ್ದಿವಿ ಎಂದ ಮೇಲೆ ಒಂದಲ್ಲಾ ಒಂದು ದಿನ ಗೆಲ್ಲಲೇಬೇಕು ಎಂದಿದ್ದಾರೆ. ಕುಣಿಗಲ್ ತಾಲೂಕಿನ ಕೆಂಪನಹಳ್ಳಿ ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಡಿಕೆ ಸುರೇಶ್, ಡಿಕೆ ಶಿವಕುಮಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇದು. ಎಲ್ಲರೂ ಒಂದಲ್ಲ ಒಂದು ದಿನ ಗೆಲ್ಲಲೇಬೇಕು. ಪ್ರಯತ್ನ ಮಾಡ್ತಾ ಇದ್ದಿವಿ… ಗೆಲುವು ಸಿಕ್ಕೆ ಸಿಗುತ್ತದೆ… ಒಬ್ಬರು ಗೆಲ್ಲಲೇಬೇಕು ಇನ್ನೊಬ್ಬರು ಸೋಲಲೇಬೇಕು ಎಂದು ಡಿಕೆಶಿ ಮಾರ್ಮಿಕವಾಗಿ ನುಡಿದಿದ್ದಾರೆ.
ರಾಜಕೀಯದಲ್ಲೂ ಸೋಲು ಗೆಲುವು ಇದ್ದದ್ದೆ. ಗೆದ್ದಿದ್ದೇವೆ ಎಂದು ಮೇಲಕ್ಕೆ ಹೋಗೋಕೆ ಆಗಲ್ಲ. ಸೋತಿದ್ದೇವೆ ಎಂದು ಪ್ರಯತ್ನ ಬಿಡೋಕೆ ಆಗಲ್ಲ. ಕ್ರೀಡಾಪಟುಗಳ ನಿರಂತರ ಪ್ರಯತ್ನದಂತೆ. ನಿಮ್ಮಗಳ ಆಶೀರ್ವಾದದಿಂದ ನನ್ನ ಪ್ರಯತ್ನವೂ ನಿರಂತರವಾಗಿ ಇರುತ್ತದೆ ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ.



