ಹೈದರಾಬಾದ್: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ವ್ಯಕ್ತಿಯೊಬ್ಬ ಹೆಚ್ಐವಿ ಪಾಸಿಟಿವ್ ರಕ್ತ (HIV-Positive Blood) ಇಂಜೆಕ್ಟ್ ಮಾಡಿದ್ದ, ಇದನ್ನ ತಿಳಿದ ಯುವತಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮಾರ್ಚ್ 11 ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಮನೋಹರ್ ಎಂಬಾತ, ಯುವತಿಗೆ ಬಲವಂತವಾಗಿ ತನ್ನ ಮನೆಯಲ್ಲಿ ಹೆಚ್ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿದ್ದ.
ಘಟನೆಯ ವಿವರ
ಮನೋಹರ್ ಎಂಬ ಯುವಕನೊಂದಿಗೆ ಯುವತಿಯ ಮನೆಯವರೆಲ್ಲಾ ಸೇರಿ ಮದುವೆ ನಿಶ್ಚಯ ಮಾಡಿದ್ದರು ಆದರೆ ಈ ಯುವಕನ ಪೋಷಕರು ಹೆಚ್ಐವಿ ಪೀಡಿತರಾಗಿದ್ದರು. ಜೊತೆಗೆ ಕಳೆದ ಸೆಪ್ಟೆಂಬರ್ನಲ್ಲಿ ಯುವತಿಯ ಪೋಷಕರು ಮದುವೆಯಾಗುವ ಹುಡುಗನಿಗೂ ಈ HIV ಸೋಂಕಿನ ಪರೀಕ್ಷೆ ಮಾಡಿಸಿದ್ದರು, ಅದರಲ್ಲಿ ಯುವಕನಿಗೆ ವೈರಸ್ ಇರುವುದು ದೃಡಪಟ್ಟಿತ್ತು. ಹೀಗಾಗಿ ಯುವತಿ ತಕ್ಷಣ ಮದುವೆಯನ್ನ ನಿರಾಕರಿಸಿದ್ದಳು.
ಇದರಿಂದ ಕೋಪಗೊಂಡ ಆರೋಪಿ ಮನೋಹರ್ ಆಕೆಗೆ ಹೆಚ್ಐವಿ ಇಂಜೆಕ್ಷನ್ ನೀಡಿದ್ದಾನೆ. ಈ ಬಗ್ಗೆ ತಿಳಿದ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದರು. ಆದರೆ ಘಟನೆ ನಡೆದು ಸುಮಾರು ಒಂದು ತಿಂಗಳ ನಂತರ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಘಟನೆಯಿಂದ ಯುವತಿ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು. ಭಯದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.



