ಚಿಕ್ಕಮಗಳೂರು: ಯುವಕನೊಬ್ಬ ನಿಯಂತ್ರಣ ತಪ್ಪಿ ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ್ದು, ಇದರ ವಿಚಾರ ತಿಳಿಯುತ್ತಿದ್ದಂತೆ ತಾಯಿಯೂ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವಂತಹ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪುತ್ರ ಶಮಂತ್ (23) ಹಾಗೂ ತಾಯಿ ರವಿಕಲಾ (48) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಈ ದುರಂತ ಘಟನೆ ನಡೆದಿದೆ. ವರದಿಗಳ ಪ್ರಕಾರ ಶಮಂತ್ ಜೀಪ್ ಚಲಾಯಿಸುತ್ತಿದ್ದಾಗ ದುರ್ಘಟನೆ ನಡೆದಿದೆ. ಹಲವು ದಿನಗಳಿಂದ ಶಮಂತ್ ಪಿಕಪ್ ಜೀಪ್‌ನಲ್ಲಿ ಕಾರ್ಮಿಕರನ್ನು ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದ.
ನಿನ್ನೆ ಸಂಜೆ ಬಾಡಿಗೆ ಇದೆ ಎಂದು ಶಮಂತ್ ಕಳಸಕ್ಕೆ ಬಂದು ವಾಪಸ್ ಹೋಗುವಾಗ ಭದ್ರಾ ನದಿ ಬಳಿ ದುರಂತ ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ಜೀಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿ ಹರಿಯುತ್ತಿದ್ದ ಭದ್ರಾ ನದಿಗೆ ಜೀಪ್ ಸಮೇತ ಶಮಂತ್ ಬಿದ್ದು ಸಾವನ್ನಪ್ಪಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಶಮಂತ್ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಲಾಗಿದೆ. ಶಮಂತ್ ತಾಯಿ ಮಗನ ಸಾವಾಗಿದೆ ಎಂಬ ವಿಚಾರ ತಿಳಿದು ಭದ್ರಾ ನದಿ ಬಳಿ ಕಣ್ಣೀರಿಟ್ಟಿದ್ದಾರೆ. ಆದರೆ ಮಗನ ಮೃತದೇಹವನ್ನು ಹೊರಗೆ ತೆಗೆಯುವುದಕ್ಕೂ ಮುನ್ನವೇ ರವಿಕಲಾ ರಾತ್ರಿ ಮನೆಗೆ ಹಿಂತಿರುಗಿ, ಹತ್ತಿರದಲ್ಲೇ ಇದ್ದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.