Monday, October 6, 2025
Google search engine

Homeಸ್ಥಳೀಯಶತಮಾನದ ಹೊಸ್ತಿಲಲ್ಲಿ ಯುವರಾಜ ಕಾಲೇಜು

ಶತಮಾನದ ಹೊಸ್ತಿಲಲ್ಲಿ ಯುವರಾಜ ಕಾಲೇಜು

ಮೈಸೂರು: ಭಾರತದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯ ಹಲವು ಮಹತ್ವಗಳ ಗಣಿ. ಮೈಸೂರು ಮಹಾರಾಜ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಯ ಫಲವಾಗಿ, ಸಾಮಾಜಿಕ ನ್ಯಾಯದ ಧ್ಯೋತಕವಾಗಿ ಹಾಗೂ ಶೈಕ್ಷಣಿಕ ಸಬಲೀಕರಣದ ಸದುದ್ದೇಶದಿಂದಾಗಿಯೇ ಉದಯಗೊಂಡ ಈ ವಿಶ್ವವಿದ್ಯಾನಿಲಯ ಇದೀಗ ಶತಮಾನವನ್ನು ಪೂರೈಸಿ ಮುನ್ನಡೆಯುತ್ತಿದೆ.

ಈ ಜ್ಞಾನ ದೇಗುಲದಲ್ಲಿ ಪದವಿ ಪಡೆದವರು ದೇಶ ವಿದೇಶಗಳಲ್ಲೂ ಅಸಂಖ್ಯಾತ ಸಂಖ್ಯೆಯಲ್ಲಿದ್ದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಾಗೆಯೇ ರಾಜ್ಯ, ರಾಷ್ಟçಮಟ್ಟದ ರಾಜಕಾರಣದಲ್ಲೂ ಮಿಂಚಿದ್ದಾರೆ. ಇಂತಹ ಮೇರು ಸದೃಶವಾದ ಹೆಗ್ಗಳಿಕೆಯಿಂದ ಬೀಗುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಗಳಲ್ಲಿ ಪ್ರತಿಷ್ಠಿತ ಕಾಲೇಜು ಎಂದು ಪ್ರಸಿದ್ಧಿ ಪಡೆದು ಅಗ್ರಸ್ಥಾನದಲ್ಲಿರುವ ಯುವರಾಜ ಕಾಲೇಜು ತನ್ನ ವೈಶಿಷ್ಟö್ಯಪೂರ್ಣ ಪ್ರಗತಿಯಿಂದ ಎಲ್ಲರ ಗಮನ ಸೆಳೆದಿದೆ. ಸ್ವಾಯತ್ತತೆಯ ಮಾನ್ಯತೆಯೊಂದಿಗೆ ಉತ್ಕೃಷ್ಟತಾ ಸಾಮರ್ಥ್ಯವಿರುವ ಮಹಾವಿದ್ಯಾಲಯ ಎಂಬ ಸ್ಥಾನಮಾನವನ್ನು ಪಡೆದಿದೆ. ಇಲ್ಲಿ ಪದವಿಯ ಜೊತೆಗೆ ಸ್ನಾತಕೋತ್ತರ ಪದವಿಗೂ ಹಾಗೂ ಸಂಶೋಧನಾ ಅಧ್ಯಯನಕ್ಕೂ ಅವಕಾಶ ಕಲ್ಪಿಸಲಾಗಿದೆ.

೧೯೨೭ ರಲ್ಲಿ ಸ್ಥಾಪನೆಯಾಗಿ ೯೮ ವಸÀಂತಗಳನ್ನು ಕಂಡಿರುವ ಯುವರಾಜ ಕಾಲೇಜು ಮೈಸೂರು ಅರಸರ ದೂರದೃಷ್ಟಿತ್ವದ ಸಂಕೇತವಾಗಿದೆ. ವಿಜ್ಞಾನ ಕಾಲೇಜು ಎಂದು ಹೆಸರಾಗಿರುವ ಈ ಕಾಲೇಜಿನಲ್ಲಿ ಬಿ.ಎಸ್ಸಿ ಮಾತ್ರವಲ್ಲದೇ ಬಿಬಿಎ, ಬಿಸಿಎ, ಎಂಬಿಎ ಪದವಿ ಕೋರ್ಸ್ಗಳನ್ನು ನಡೆಸಲಾಗುತ್ತಿದೆ. ೫೦ ವರ್ಷಗಳ ಹಿಂದೆಯೇ ವಿಜ್ಞಾನವನ್ನು ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡಿದ ಕೀರ್ತಿ ಯುವರಾಜ ಕಾಲೇಜಿಗೆ ಸಲ್ಲುತ್ತದೆ. ತನ್ನ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಮಾತ್ರವಲ್ಲದೆ ಸಾಮಾಜಿಕ ಬದ್ಧತೆಗೂ ಹೆಸರುವಾಸಿಯಾಗಿದೆ. ಸಾಮಾಜಿಕ ನ್ಯಾಯದೊಂದಿಗೆ ಶಿಕ್ಷಣದಲ್ಲಿ ಶ್ರೇಷ್ಠತೆಗೆ ಬದ್ಧವಾಗಿರುವ ಈ ಕಾಲೇಜು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಪ್ರಯೋಜನಗಳನ್ನು ವಿಸ್ತರಿಸಲು ಶ್ರಮಿಸುತ್ತಿದೆ. ಯುವರಾಜ ಕಾಲೇಜಿನಿಂದ ಹೊರಬಂದು ವಿಶಾಲ ಜಗತ್ತಿಗೆ ಕಾಲಿಟ್ಟ ವಿದ್ಯಾರ್ಥಿಗಳು ಶಿಕ್ಷಣ, ಕಲೆ, ವಿಜ್ಞಾನ, ಕಾನೂನು, ವಾಣಿಜ್ಯ, ಆಡಳಿತ, ಕ್ರೀಡೆ, ಪತ್ರಿಕೋದ್ಯಮ ಮತ್ತು ರಾಜಕೀಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ ತಾವು ಓದಿದ ವಿದ್ಯಾಸಂಸ್ಥೆಗೂ ಕೀರ್ತಿ ತಂದಿದ್ದಾರೆ.

ಮೈಸೂರು ಸಂಸ್ಥಾನದ ಅರಸರು ಜನಸಾಮಾನ್ಯರಲ್ಲಿ ಶಿಕ್ಷಣವನ್ನು ಉತ್ತೇಜಿಸಿ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಹರಡುತ್ತಾ, ಅವರನ್ನು ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ವೈಜ್ಞಾನಿಕ, ಔದ್ಯೋಗಿಕ ಮತ್ತು ಸಾಮಾಜಿಕ ಜೀವನಕ್ಕೆ ಸಜ್ಜುಗೊಳಿಸಬೇಕೆಂಬ ಕನಸು ಕಂಡಿದ್ದರು. ಮೈಸೂರಿನ ದೂರದೃಷ್ಟಿಯುಳ್ಳ ದಿವಾನರಾದ ಸರ್ ಎಂ. ವಿಶ್ವೇಶ್ವರಯ್ಯ ಅವರು ಜನರ ಕನಸುಗಳು ಮತ್ತು ಆಶಯಗಳಿಗೆ ಆಕಾರ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ಮೊದಲನೆಯ ಮತ್ತು ದೇಶದ ಆರನೆಯ ವಿಶ್ವವಿದ್ಯಾನಿಲಯವಾಗಿ ಮೈಸೂರು ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದಿತು. ಮೈಸೂರಿನ ಅಂದಿನ ತತ್ತ್ವಜ್ಞಾನಿ–ದೂರದೃಷ್ಟಿಯ ಮಹಾರಾಜರಾದ ಶ್ರೀಮಾನ್ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೧೬ರ ಜುಲೈ ೨೭ರಂದು ಈ ವಿಶ್ವವಿದ್ಯಾಲಯವನ್ನು ಅಧಿಕೃತವಾಗಿ ಸ್ಥಾಪಿಸಿದರು. ಮಹಾರಾಜರು ಸ್ವತಃ ವಿಶ್ವವಿದ್ಯಾಲಯದ ಮೊದಲ ಕುಲಾಧಿಪತಿಯಾಗಿದ್ದರು.

ಉದಾರವಾದಿ ಮತ್ತು ಪ್ರಗತಿಪರ ನಿಲುವುಗಳಿಗೆ ಹೆಸರುವಾಸಿಯಾದ ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಯುವರಾಜ ಕಾಲೇಜಿನ ಕÀಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದರು. ಆ ಕಟ್ಟಡದ ಅಡಿಪಾಯ ಶಿಲಾನ್ಯಾಸವನ್ನು ೧೯೨೭ರ ಆಗಸ್ಟ್ ೮ರಂದು ಪ್ರಖ್ಯಾತ ಚಿಂತಕ ಹಾಗೂ ಬುದ್ಧಿಜೀವಿಯಾಗಿದ್ದ ಆಗಿನ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ರಾಜತಂತ್ರಜ್ಞ ಶ್ರೀ ಬ್ರಜೇಂದ್ರನಾಥ ಸೀಲ್ ಅವÀರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮೈಸೂರಿನ ದಿವಾನ ಸರ್ ಮಿರ್ಜಾ ಇಸ್ಮಾಯಿಲ್, ಪಂಡಿತ್ ಮೋತಿಲಾಲ್ ನೆಹರು ಮತ್ತು ಮಹಾಮಹೋಪಾಧ್ಯಾಯ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಮುಖ್ಯ ಬ್ಲಾಕ್ ನಿರ್ಮಾಣ ಪೂರ್ಣಗೊಂಡ ನಂತರ ೧೯೨೮ರ ಜೂನ್ ೨೪ರಂದು ಕಲೆ ಮತ್ತು ವಿಜ್ಞಾನ ವಿಭಾಗಗಳಲ್ಲಿ ಎರಡು ವರ್ಷದ ಮಧ್ಯಂತರ ಕೋರ್ಸ್ಗಳನ್ನು ಪ್ರಾರಂಭಿಸಲಾಯಿತು. ಈ ಮೂಲಕ ಯುವರಾಜ ಕಾಲೇಜು ತನ್ನ ಶೈಕ್ಷಣಿಕ ಮತ್ತು ಸಂಸ್ಥಾತ್ಮಕ ಪ್ರಯಾಣವನ್ನು ಅಧಿಕೃತವಾಗಿ ಆರಂಭಿಸಿತು. ಸ್ವಾತಂತ್ರö್ಯ ನಂತರÀ ೧೯೪೮ರಲ್ಲಿ ಈ ಕಾಲೇಜನ್ನು ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಯಿತು. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆದ ನಿರಂತರ ಹೆಚ್ಚಳಕ್ಕೆ ಅನುಗುಣವಾಗಿ ಸುಸಜ್ಜಿತ ಪ್ರಯೋಗಾಲಯಗಳು ಮತ್ತು ಪ್ರಾವೀಣ್ಯ ಹೊಂದಿದ ಅಧ್ಯಾಪಕರ ನೇಮಕವಾಯಿತು.

ಯುವರಾಜ ಕಾಲೇಜು ಮೊದಲಿಗೆ ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಪೂರ್ವ–ವೈದ್ಯಕೀಯ ವಿದ್ಯಾರ್ಥಿಗಳು, ಮಹಾರಾಣಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಮೈಸೂರಿನ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವ ಮಹತ್ವದ ಹೊಣೆಗಾರಿಕೆಯನ್ನು ನಿರ್ವಹಿಸಿತು. ೧೯೬೦ರೊಳಗೆ ಕಾಲೇಜಿನಲ್ಲಿ ಎಂ.ಎಸ್ಸಿ. ಕೋರ್ಸ್ಗಳು ಸಹ ಯಶಸ್ವಿಯಾಗಿ ನಡೆಯುತ್ತಿದ್ದವು. ಆದರೆ ಶಿಕ್ಷಣ ನೀತಿಗಳಲ್ಲಿ ಉಂಟಾದ ಬದಲಾವಣೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕಂಡುಬAದ ಗಣನೀಯ ಏರಿಕೆ ಹಿನ್ನೆಲೆ ಆ ಕೋರ್ಸ್ಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ, ಬಿ.ಎಸ್ಸಿ. ಕೋರ್ಸ್ನ್ನು ಮಾತ್ರ ಮುಂದುವರಿಸಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಯುವರಾಜ ಕಾಲೇಜು ವಿಜ್ಞಾನ ಶಿಕ್ಷಣದ ಕ್ಷೇತ್ರದಲ್ಲಿ ತನ್ನ ದೀರ್ಘಕಾಲದ ಗೌರವಾನ್ವಿತ ಸಂಪ್ರದಾಯ ಮತ್ತು ವಿಶಿಷ್ಟ ಶೈಕ್ಷಣಿಕ ಗುರುತಿಗಾಗಿ ಹೆಸರುವಾಸಿಯಾಗಿದೆ.

೧೯೩೪ ರಲ್ಲಿ ರಾಜಕುಮಾರ ಜಯಚಾಮರಾಜೇಂದ್ರ ಒಡೆಯರ್ ಅವರÀÄ ಕಿರಿಯ ಇಂಟರ್ಮೀಡಿಯೇಟ್ ತರಗತಿಗೆ ಸೇರಿದರು. ಭಾರತದ ಒಂದು ಮಹಾನ್ ರಾಜ್ಯದ ಭವಿಷ್ಯದ ಆಡಳಿತಗಾರ, ಆಡಳಿತ ಕುಟುಂಬದ ರಾಜಕುಮಾರ, ಸಾಮಾನ್ಯ ಜನರ ನಡುವೆ ಕುಳಿತು ಎಲ್ಲರಿಗೂ ಮುಕ್ತವಾದ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು ನಿಜಕ್ಕೂ ವಿಶಿಷ್ಟವಾಗಿತ್ತು!. ೧೯೪೧ ರಿಂದ ೧೯೪೭ ವರೆಗಿನ ವರ್ಷಗಳು ತೊಂದರೆ ಮತ್ತು ಪ್ರಕ್ಷುಬ್ಧತೆಯ ಅವಧಿಯಾಗಿತ್ತು. ರಾಷ್ಟ್ರದ ಕರೆಗೆ ವಿಧೇಯರಾಗಿ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ‍್ಯ ಚಳವಳಿಯಲ್ಲಿ ಸೇರಿಕೊಂಡು ಮಾತೃಭೂಮಿಯ ವಿಮೋಚನೆಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಅನೇಕ ಪ್ರಮುಖ ಸ್ವಾತಂತ್ರ‍್ಯ ಹೋರಾಟಗಾರರು ಯುವರಾಜ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದರು.

ಶ್ರೇಷ್ಠ ಗುರುಪರಂಪರೆ:
ಯುವರಾಜ ಕಾಲೇಜು ರಾಜ್ಯದಾದ್ಯಂತ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಸಿದ್ಧಿಯಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ಖ್ಯಾತಿ ಪಡೆದ ಅನೇಕ ಪ್ರತಿಭಾವಂತ ಹಾಗೂ ಬದ್ಧ ಶಿಕ್ಷಕರು ಸಂಸ್ಥೆಯನ್ನು ಉನ್ನತ ಶೈಕ್ಷಣಿಕ ಶಿಖರಕ್ಕೆ ಕೊಂಡೊಯ್ಯುವಲ್ಲಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಈ ಸಂಸ್ಥೆಗೆ ಸೇವೆ ಸಲ್ಲಿಸಿದ ಪ್ರಮುಖ ಶಿಕ್ಷಕರಲ್ಲಿ ರಾಷ್ಟ್ರಕವಿ ಡಾ. ಕೆ. ವಿ. ಪುಟ್ಟಪ್ಪ, ಪ್ರೊ. ಎಂ. ನಾಗರಾಜ್, ಪ್ರೊ. ಬಿ. ಎಂ. ಶ್ರೀಕಂಠಯ್ಯ, ಪ್ರೊ. ಎ. ಆರ್. ವಾಡಿಯಾ, ಪ್ರೊ. ಜೆ. ಸಿ. ರೊಲ್ಲೊ, ಪ್ರೊ. ಎ. ಎನ್. ಮೂರ್ತಿ ರಾವ್, ಶ್ರೀ ಎಸ್. ವಿ. ರಂಗಣ್ಣ, ಪ್ರೊ. ಟಿ. ಎನ್. ಶ್ರೀಕಂಠಯ್ಯ, ಪ್ರೊ. ಕೆ. ಸುಬ್ಬಾ ಭಟ್ಟ, ಶ್ರೀ ನಾ. ಕಸ್ತೂರಿ, ಶ್ರೀ ನರಸಿಂಹಾಚಾರ್, ಪ್ರೊ. ಟಿ. ಎಸ್. ಶಾಮರಾವ್, ಪ್ರೊ. ಹೆಚ್.ಎಂ.ಚಾಮಯ್ಯ, ಪ್ರೊ.ಎಲ್.ಎನ್.ಚಕ್ರವರ್ತಿ, ಪ್ರೊ. ಎಸ್.ಕೆ.ರಾಮಣ್ಣ, ಪ್ರೊ. ವೆಂಕಟರಾಯರು, ಪ್ರೊ.ಎಂ.ಎನ್.ನರಸಿAಹ ಅಯ್ಯಂಗಾರ್, ಪ್ರೊ.ಅನಂತ ರಂಗಾಚಾರ್, ಪ್ರೊ.ವಿ.ಪುಟ್ಟಮಾದಪ್ಪ, ಪ್ರೊ. ಜಿ.ಎಸ್.ಶಿವರುದ್ರಪ್ಪ, ಪ್ರೊ. ಉ.ಕಾ.ಸುಬ್ಬರಾಯಾಚಾರ್, ಪ್ರೊ. ಎಸ್.ವಿ.ಕೇಶವಹೆಗ್ಗಡೆ, ಪ್ರೊ. ಎಸ್.ಅನಂತನಾರಾಯಣ, ಪ್ರೊ. ಎಂ.ಐ.ಕೆ.ದುರಾನಿ, ಪ್ರೊ. ಎಲ್.ಸೀಬಯ್ಯ, ಪ್ರೊ. ವೆಂಕಟರಾಯರು, ಪ್ರೊ. ಎಂ.ಎನ್.ನರಸಿAಹ ಅಯ್ಯಂಗಾರ್, ಪ್ರೊ. ಇಂದಿರಾಬಾಯಿ, ಪ್ರೊ. ಸುಬ್ಬರಾವ್, ಪ್ರೊ. ಎಲ್.ಬಸವರಾಜು, ಪ್ರೊ. ಜಿ.ಹೆಚ್.ನಾಯಕ್, ಪ್ರೊ. ಕೆ.ಸಿ.ಪಂಚಲಿAಗೇಗೌಡ, ಪ್ರೊ. ಬಿ.ನಂ.ಚAದ್ರಯ್ಯ, ಪ್ರೊ. ಪಾರ್ವತಮ್ಮ, ಪ್ರೊ. ಬಿ.ಆರ್.ಗೋಪಾಲ್, ಪ್ರೊ. ಲಕ್ಷö್ಮಣ್‌ರಾವ್, ಪ್ರೊ. ಕೆ.ಶ್ರೀನಿವಾಸನ್, ಪ್ರೊ. ಜಿ.ಎಸ್.ಮೈಲಾರಿರಾಯರು, ಪ್ರೊ. ಷಡಕ್ಷರಸ್ವಾಮಿ, ಪ್ರೊ. ಎಚ್.ಎನ್.ರಾಮಕೃಷ್ಣ, ಪ್ರೊ. ಎಸ್.ನಾರಾಯಣಶೆಟ್ಟಿ, ಪ್ರೊ. ಆರ್.ಗುರುರಾಜರಾವ್, ಪ್ರೊ. ಕೆ.ಎಂ.ವೀರಪ್ಪ, ಪ್ರೊ. ಡಿ.ನರಸಿಂಹಮೂರ್ತಿ, ಪ್ರೊ. ವಿ.ಎಂ.ಷಣ್ಮುಗA, ಪ್ರೊ. ಎನ್.ಬೋರಲಿಂಗಯ್ಯ, ಪ್ರೊ. ರಾಜಲಕ್ಷಿö್ಮÃ, ಪ್ರೊ. ರಮಾನಂದಶೆಟ್ಟಿ, ಪ್ರೊ. ಡಿ.ನಂಜುAಡಯ್ಯ, ಪ್ರೊ. ಕೆ.ಎಸ್.ಭಗವಾನ್, ಪ್ರೊ. ಎ.ಎಂ.ಪುಟ್ಟಸ್ವಾಮಿಗೌಡ, ಪ್ರೊ. ಪದ್ಮಾಜಿ., ಪ್ರೊ. ಬಿ.ಕೆ.ಜಗದೀಶ್ ಮುಂತಾದವರು ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.

ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿ ಸಮೂಹ:
ಯುವರಾಜ ಕಾಲೇಜು ಕಳೆದ ತೊಂಬತ್ತೆAಟು ವರ್ಷಗಳಿಂದ ದೇಶಕ್ಕೆ ಹೆಮ್ಮೆ ತರುವ ಹಲವಾರು ಪ್ರಸಿದ್ಧ ವಿದ್ವಾಂಸರು, ರಾಜಕಾರಣಿಗಳು, ವಕೀಲರು, ಎಂಜಿನಿಯರ್‌ಗಳು, ವೈದ್ಯರು, ಆಡಳಿತಗಾರರು, ಕ್ರೀಡಾಪಟುಗಳು ಮತ್ತು ಶ್ರೇಷ್ಠ ನಾಯಕರನ್ನು ಸೃಷ್ಟಿಸಿದೆ. ಅವರಲ್ಲಿ ಮೈಸೂರಿನ ದೊರೆ ಶ್ರೀ ಜಯ ಚಾಮರಾಜೇಂದ್ರ ಒಡೆಯರ್, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಶ್ರೀ ಇ.ಎಸ್. ವೆಂಕಟರಾಮಯ್ಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣ, ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫೌಂಡೇಶನ್ ರಿಸರ್ಚ್ನ ಮಾಜಿ ನಿರ್ದೇಶಕ ಪ್ರೊ. ಬಿ. ವಿ. ಶ್ರೀಕಂಠನ್, ಪದ್ಮಭೂಷಣ ಶ್ರೀ ವೀಣೆ ದೊರೆಸ್ವಾಮಿ ಅಯ್ಯಂಗಾರ್, ಸಾಹಿತಿ ಶ್ರೀ ಎ. ಕೆ. ರಾಮಾನುಜಂ, ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಶ್ರೀ ಟಿ. ಎಸ್. ಸತ್ಯನ್, ಅಂತರರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಶ್ರೀ ಆರ್. ಕೆ. ಲಕ್ಷ್ಮಣ್, ಸ್ವಾತಂತ್ರö್ಯ ಹೋರಾಟಗಾರ ಕೆ.ಎಸ್.ಸೀತಾರಾಮ ಅಯ್ಯಂಗಾರ್, ಭಾರತ ವಾಯುಯಾನ ಅಧಿಕಾರಿಯಾಗಿದ್ದ ಆರ್.ಎಸ್.ಕೇಶವನ್, ಪ್ರಖ್ಯಾತ ವೈದ್ಯ ಡಾ. ಸಿ.ಜಿ.ನರಸಿಂಹನ್, ಕುಲಪತಿಗಳಾಗಿದ್ದ ಡಾ. ಶೇಖ್ ಅಲಿ, ಡಾ. ಕೆ. ಸಿದ್ದಪ್ಪ, ಡಾ.ಎಂ.ಮಾದಯ್ಯ, ಡಾ.ಜೆ.ಶಶಿಧರ್ ಪ್ರಸಾದ್, ಡಾ.ಕೆ.ಎಸ್.ರಂಗಪ್ಪ, ಡಾ.ರಂಗನಾಥ್ ಮತ್ತಿತರರು ಇದ್ದಾರೆ. ಹಾಗೆಯೇ ಸಿಎಫ್‌ಟಿಆರ್‌ಇ ಮಾಜಿ ನಿರ್ದೇಶಕ ಡಾ. ವಿ. ಪ್ರಕಾಶ್, ಹೆಸರಾಂತ ಸಾಹಿತಿಗಳಾದ ಪ್ರೊ. ಎಂ. ಗೋಪಾಲ ಕೃಷ್ಣ ಅಡಿಗ, ಪ್ರೊ. ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಡಾ. ಎಸ್. ಎಲ್ ಭೈರಪ್ಪ, ಅನುಪಮಾ ನಿರಂಜನ, ಶ್ರೀ ಎಂ. ವಿ. ಸೀತಾರಾಮಯ್ಯ, ಹಾಸ್ಯ ಸಾಹಿತಿ ಪ್ರೊ. ಎಂ.ಕೃಷ್ಣೇಗೌಡ, ಇಎನ್‌ಟಿ ವೈದ್ಯ ಡಾ. ಕೆ.ಎಂ.ಗೋವಿAದೇಗೌಡ ಸೇರಿದಂತೆ ಕಾಲೇಜಿನ ಅಸಂಖ್ಯಾತ ಹಳೆಯ ವಿದ್ಯಾರ್ಥಿಗಳು ರಾಷ್ಟç ಮತ್ತು ರಾಜ್ಯದ ಸರ್ಕಾರಿ ಸೇವೆಗಳು, ವಾಣಿಜ್ಯ, ಶೈಕ್ಷಣಿಕ, ಪತ್ರಿಕೋದ್ಯಮ, ಕ್ರೀಡೆ, ವೈದ್ಯಕೀಯ, ಎಂಜಿನಿಯರಿAಗ್ ಮತ್ತು ಐಟಿ ಕ್ಷೇತ್ರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ.

ರಜತ ಮಹೋತ್ಸವ:
೧೯೫೪ ರಲ್ಲಿ ಕಾಲೇಜಿನ ರಜತ ಮಹೋತ್ಸವವನ್ನು ಆಚರಿಸಲಾಯಿತು. ಮೈಸೂರು ರಾಜ್ಯದ ಕೊನೆಯ ಮಹಾರಾಜರಾದ ಶ್ರೀ ಜಯಚಾಮರಾಜ ಒಡೆಯರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದ ಸ್ಮರಣಾರ್ಥವಾಗಿ, ೧೯೩೪-೧೯೩೬ ರ ಅವಧಿಯಲ್ಲಿ ಸ್ವತಃ ಈ ಪವಿತ್ರ ಸಂಸ್ಥೆಯಲ್ಲಿ ಮಧ್ಯಂತರ ಕೋರ್ಸ್ನ ವಿದ್ಯಾರ್ಥಿಯಾಗಿದ್ದ ಕಾರಣ ಕಾಲೇಜನ್ನು “ಯುವರಾಜ ಕಾಲೇಜು” ಎಂದು ಮರುನಾಮಕರಣ ಮಾಡಲಾಯಿತು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ೨೫ ವರ್ಷಗಳಲ್ಲಿ ಕಾಲೇಜು ವ್ಯಾಪಕವಾಗಿ ಅಭಿವೃದ್ಧಿ ಹೊಂದಿತು ಮತ್ತು ಬೌದ್ಧಿಕ ಪ್ರಪಂಚದ ಮೆಚ್ಚುಗೆ ಪಡೆಯಿತು.

ವಜ್ರ ಮಹೋತ್ಸವ:
೧೯೮೯ ರಲ್ಲಿ ಕಾಲೇಜಿನ ವಜ್ರ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಡಿಸೆಂಬರ್ ೨೫, ೧೯೮೯ ರಂದು ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಶ್ರೀ ಇ.ಎಸ್. ವೆಂಕಟರಾಮಯ್ಯ ಅವರು ಉದ್ಘಾಟಿಸಿದರು. ಸಮಾಜಕ್ಕೆ ಕಾಲೇಜಿನ ಸೇವೆ ಮತ್ತು ವೈವಿಧ್ಯಮಯ ಕ್ಷೇತ್ರಗಳಲ್ಲಿ ಇಲ್ಲಿ ಓದಿದ ವಿದ್ಯಾರ್ಥಿಗಳು ಸಾಧಿಸಿದ ಸಾಧನೆಯನ್ನು ಮೆಲುಕು ಹಾಕಲಾಯಿತು.

ಅಮೃತ ಮಹೋತ್ಸವ:
೨೦೦೪ ರಲ್ಲಿ ಕಾಲೇಜು ಅಮೃತ ಮಹೋತ್ಸವವನ್ನು ಆಚರಿಸಿತು. ಆಗಿನ ಕುಲಪತಿ ಡಾ.ಜೆ.ಶಶಿಧರಪ್ರಸಾದ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎ. ಎಂ. ಪುಟ್ಟಸ್ವಾಮಿ ಗೌಡ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಮಿತಿಯನ್ನು ರಚಿಸಲಾಯಿತು ಮತ್ತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಚರ್ಚೆಗಳು, ವಿಶೇಷ ಉಪನ್ಯಾಸಗಳು, ವಿಜ್ಞಾನ ಪ್ರದರ್ಶನ, ಹಳ್ಳಿಗಳಲ್ಲಿ ವಿಸ್ತರಣಾ ಚಟುವಟಿಕೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಅವೆಲ್ಲವೂ ತುಂಬಾ ಅರ್ಥಪೂರ್ಣವಾಗಿ ಸಾಕಾರಗೊಂಡವು.

ಕಾಲೇಜಿನ ಧ್ಯೇಯ:
ವಿದ್ಯಾರ್ಥಿಗಳು ತಮ್ಮ ಬದುಕು ಹಾಗೂ ವೃತ್ತಿಜೀವನದಲ್ಲಿ ಬೆಳೆದು ಮುಂದುವರಿಯಲು ಸಾಧ್ಯವಾಗುವ ಅರ್ಥಪೂರ್ಣ ಶೈಕ್ಷಣಿಕ ವಾತಾವರಣ, ಸಮೃದ್ಧವಾದ ಅವಕಾಶಗಳು ಮತ್ತು ಅನುಭವಗಳನ್ನು ಒದಗಿಸುವುದೇ ಕಾಲೇಜಿನ ಧ್ಯೇಯವಾಗಿದೆ. ಕಾಲೇಜು ಯುವ ಕಲಿಕಾರ್ಥಿಗಳಲ್ಲಿ ಸಾಮಾಜಿಕ ಕಾಳಜಿಗಳ ಕುರಿತು ಸಂವೇದನೆಯನ್ನು ಬೆಳಸುವ ಜೊತೆಗೆ ಮಾನವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಗೌರವ ಮತ್ತು ಬದ್ಧತೆಯನ್ನು ಬೆಳೆಸುವ ಗುರಿಯನ್ನೂ ಹೊಂದಿದೆ.

ಯುವರಾಜ ಕಾಲೇಜಿನ ಧ್ಯೇಯವಾಕ್ಯವು ಮೈಸೂರು ವಿಶ್ವವಿದ್ಯಾನಿಲಯದಂತೆಯೇ ಇದೆ. ಅದರ ಲಾಂಛನದಲ್ಲಿ ಕಲ್ಪಿಸಲಾಗಿರುವಂತೆ ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯವೆಂದರೆ, ನಹಿ ಜ್ಞಾನೇನ ಸದೃಶಂ (ಜ್ಞಾನಕ್ಕೆ ಸಮನಾದದ್ದು ಯಾವುದೂ ಇಲ್ಲ) ಮತ್ತು ಸತ್ಯಮೇ ವೊಡ್ಡಾರಾಮ್ಯಹಂ (“ನಾನು ಯಾವಾಗಲೂ ಸತ್ಯವನ್ನು ಎತ್ತಿಹಿಡಿಯುತ್ತೇನೆ”) ಮತ್ತು ಇದು ದೃಷ್ಟಿಕೋನ, ನೈತಿಕ ರಚನೆ ಮತ್ತು ಆದರ್ಶವಾದವನ್ನು ಸಂಕ್ಷೇಪಿಸುತ್ತದೆ.

ತೊAಬತ್ತೆAಟು ವರ್ಷದ ಹಿಂದೆ ನಿರ್ಮಿಸಿದ ಕಾಲೇಜಿನ ಮುಖ್ಯ ಕಟ್ಟಡ ವಾಸ್ತುಶಿಲ್ಪ ದೃಷ್ಟಿಯಿಂದ ತುಂಬಾ ಭವ್ಯ ಆಗಿದೆ ಮತ್ತು ಸುಂದರವಾಗಿದೆ. ಎಲ್ಲಾ ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯಗಳು ವಿಶಾಲವಾಗಿವೆ. ಕಾಲೇಜಿನ ತ್ವರಿತ ವಿಸ್ತರಣೆ ಮತ್ತು ಸ್ಥಳಾವಕಾಶದ ಕೊರತೆಯಿಂದಾಗಿ ಹೆಚ್ಚಿನ ಮೂಲಸೌಕರ್ಯ ಸೌಲಭ್ಯಗಳ ಅಗತ್ಯತೆ ಉಂಟಾಗಿತ್ತು. ಆದುದರಿಂದ ಹಳೆಯ ಕಟ್ಟಡದ ಜೊತೆಗೆ ಹೊಸ ಕಟ್ಟಡಗಳನ್ನು ಕಟ್ಟಲಾಯಿತು. ಲಭ್ಯವಿದ್ದ ಸೌಲಭ್ಯಗಳು ಉತ್ತಮವಾಗಿದ್ದರೂ ಕಾಲೇಜಿನ ವೇಗವಾದ ಪ್ರಗತಿ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಸಂಶೋಧನಾ ಚಟುವಟಿಕೆಗಳಲ್ಲಿನ ಏರಿಕೆಯಿಂದಾಗಿ ಅತ್ಯಾಧುನಿಕ ಮತ್ತು ತಾಂತ್ರಿಕವಾಗಿ ಸುಧಾರಿತ ಸಂಶೋಧನಾ ಪ್ರಯೋಗಾಲಯಗಳು ಮತ್ತು ಉಪಕರಣ ವ್ಯವಸ್ಥೆಯುಳ್ಳ ಕೋಣೆಯಂತಹ ಕೇಂದ್ರೀಕೃತ ಸೌಲಭ್ಯಗಳನ್ನು ಅವಶ್ಯಕತೆಗೆ ತಕ್ಕಂತೆ ನಿರ್ಮಿಸಲಾಗಿದೆ.

ಕಾಲೇಜಿನ ಶೈಕ್ಷಣಿಕ ಮತ್ತು ಸಂಶೋಧನಾ ಪ್ರಯತ್ನಗಳನ್ನು ಉಳಿಸಿಕೊಳ್ಳುವ ಪ್ರಮುಖ ಅಂಶವೆAದರೆ ಸಾಮಾಜಿಕ ಜವಾಬ್ದಾರಿ. ಇದು ಪ್ರಮುಖ ವಿಜ್ಞಾನ ಕಾಲೇಜಾಗಿ, ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವುದರ ಜೊತೆಗೆ, ಅವರನ್ನು ಸಾಮಾಜಿಕ ಬದಲಾವಣೆಯ ಸಕ್ರಿಯ ಮಧ್ಯವರ್ತಿಯಾಗಿ ರೂಪಿಸಿದೆÀ. ಕೆಲವು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಪರಿಹಾರಗಳನ್ನು ಹುಡುಕುತ್ತದೆ. ಸಾಮಾಜಿಕ ಜವಾಬ್ದಾರಿಯ ಸಂಸ್ಕೃತಿಯನ್ನು ಸೃಷ್ಟಿಸುವ ಮಾದರಿ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC ) ೨೦೦೫ರಲ್ಲಿ ಯುವರಾಜ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಿತು. ಅದಾದ ನಂತರದಿAದಲೇ ಕಾಲೇಜು ಸಂಶೋಧನೆ, ಬೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಲು ಹಾಗೂ ನಿರಂತರವಾಗಿ ಕಾಯ್ದುಕೊಳ್ಳಲು ಶ್ರಮಿಸುತ್ತಿದೆ. ಪ್ರಸ್ತುತ ಯುವರಾಜ ಕಾಲೇಜಿನಲ್ಲಿ ಬಿ.ಎಸ್‌ಸಿ., ಬಿ.ಸಿ.ಎ., ಬಿ.ಬಿ.ಎ., ಎಂ.ಎಸ್ಸಿ, ಎಂ.ಬಿ.ಎ ಮತ್ತು ಪಿಎಚ್.ಡಿ. ಪದವಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಮಾನ್ಯತೆ ರೂಪವಾಗಿ ೨೦೧೦ರಲ್ಲಿ “ಶ್ರೇಷ್ಠತೆಯ ಸಾಮರ್ಥ್ಯವಿರುವ ಕಾಲೇಜು” ಎಂಬ ಗೌರವಕ್ಕೆ ಭಾಜನವಾಗಿದೆ.
ಮೈಸೂರು ವಿಶ್ವವಿದ್ಯಾನಿಲಯ ಯುವರಾಜ ಕಾಲೇಜಿಗೆ ಸÀಂಪೂರ್ಣ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡಿದೆ. ವಿಶ್ವವಿದ್ಯಾನಿಲಯದಿಂದ ಸ್ವತಂತ್ರವಾಗಿ ಕೋರ್ಸ್ಗಳು ಮತ್ತು ಪಠ್ಯಕ್ರಮಗಳನ್ನು ವಿನ್ಯಾಸಗೊಳಿಸುತ್ತದೆ. ಶೈಕ್ಷಣಿಕ ಕ್ಯಾಲೆಂಡರ್, ಬೋಧನಾ ವೇಳಾಪಟ್ಟಿಗಳು ಮತ್ತು ಪರೀಕ್ಷಾ ವೇಳಾಪಟ್ಟಿಗಳು ಸಂಪೂರ್ಣವಾಗಿ ಸ್ವತಂತ್ರವಾಗಿದ್ದು, ವಿಶ್ವವಿದ್ಯಾನಿಲಯದ ನಿಯಮಾವಳಿಗಳಿಂದ ವಿಭಿನ್ನವಾಗಿವೆ. ಎಲ್ಲಾ ಶೈಕ್ಷಣಿಕ ವಿಷಯಗಳಿಗೆ ಸ್ವತಂತ್ರ ಶೈಕ್ಷಣಿಕ ಮಂಡಳಿಯು ನಿಯಂತ್ರಕ ಪ್ರಾಧಿಕಾರವನ್ನು ಹೊಂದಿದ್ದು, ವಿಶ್ವವಿದ್ಯಾನಿಲಯದ ಸಲಹೆ ಅನುಸಾರ ಆಡಳಿತ ಮಂಡಳಿಯು ಎಲ್ಲಾ ಆಡಳಿತಾತ್ಮಕ ವಿಷಯಗಳನ್ನು ನಿರ್ವಹಿಸುತ್ತದೆ. ಎಲ್ಲಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವ ಸಮಗ್ರ ಶಿಕ್ಷಣದ ಕಲ್ಪನೆಯನ್ನು ಪೋಷಿಸುತ್ತದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಸುಸಜ್ಜಿತವಾದ ಗ್ರಂಥಾಲಯವಿದ್ದು ವಿದ್ಯಾರ್ಥಿಗಳ ಜ್ಞಾನದಾಹÀವನ್ನು ನೀಗಿಸುತ್ತಿದೆ. ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕಗಳು ಸೇವೆ ಮತ್ತು ಶಿಸ್ತಿಗೆ ಮಾದರಿಯಾಗಿವೆ. ತರಗತಿ ಹಾಗೂ ಪ್ರಯೋಗಾಲಯ ಕಲಿಕೆಯ ಅನುಭವವನ್ನು ಸಮಗ್ರವಾಗಿ ಪೂರೈಸುತ್ತಿದೆ.

ಕೊನೆಯದಾಗಿ, ಶತಮಾನ ಸಂಭ್ರಮದ ಹೊಸ್ತಿಲಲ್ಲಿರುವ ಯುವರಾಜ ಕಾಲೇಜು ಆಧುನಿಕತೆ ಮತ್ತು ನವನಾಗರೀಕತೆಗೆ ತಕ್ಕಂತೆ ಮತ್ತಷ್ಟು ಸುಧಾರಣೆಯಾಗಬೇಕಿದೆ. ಬಹುತೇಕ ಬಡ, ಮಧ್ಯಮವರ್ಗದ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದು ಓದುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಬೇಕಿದೆ. ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ಪೂರೈಸುವ ಅವಕಾಶ ಒದಗಿಸಬೇಕಿದೆ. ಈಗಿರುವ ವಿದ್ಯಾರ್ಥಿ ನಿಲಯಗಳನ್ನು ಉನ್ನತೀಕರಿಸಿ ಗುಣಮಟ್ಟದ ಸೌಲಭ್ಯಗಳನ್ನು ದೊರಕಿಸಿಕೊಡಬೇಕಿದೆ. ಖಾಲಿ ಇರುವ ಹುದ್ದೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಮಾಡಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕಿದೆ. ವಿಶೇಷವೆಂದರೆ ಶತಮಾನದ ವರ್ಷಾಚರಣೆಗೆ ಸಾಕ್ಷಿಯಾಗಲು ಅಣಿಯಾಗುತ್ತಿರುವ ಈ ಹೊತ್ತಿನಲ್ಲಿಯೇ ಕಾಲೇಜಿನ ಹಳೇಯ ವಿದ್ಯಾರ್ಥಿ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಈ ಹಿಂದೆ ಕಾಲೇಜಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಈಗ ಮತ್ತೆ ಅವರಿಂದ ಹೆಚ್ಚಿನ ಆರ್ಥಿಕ ನೆರವನ್ನು ನಿರೀಕ್ಷಿಸಲಾಗಿದೆ. ಸರ್ಕಾರÀ ಉದಾರವಾಗಿ ನೀಡುವ ಆರ್ಥಿಕ ಸಹಾಯ ಮತ್ತು ಸಹಕಾರ ಬಡಮಕ್ಕಳ ಶೈಕ್ಷಣಿಕ ಸಬಲೀಕರಣಕ್ಕೆ ನಿಜಕ್ಕೂ ಶಕ್ತಿ ತುಂಬ ಬಲ್ಲವು.

ಡಾ.ಸಿ.ಡಿ.ಪರಶುರಾಮ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಕನ್ನಡ ವಿಭಾಗ
ಯುವರಾಜ ಕಾಲೇಜು, ಮೈಸೂರು

RELATED ARTICLES
- Advertisment -
Google search engine

Most Popular