ಅಹ್ಮದಾಬಾದ್: ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ 96 ರನ್‌ಗಳ ಭರ್ಜರಿ ಜಯ ಸಾಧಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಗೆಲುವಿನೊಂದಿಗೆ ಭಾರತ ಕ್ರಿಕೆಟ್ ತಂಡ ತನ್ನ ಚಾಂಪಿಯನ್ ಪಟ್ಟವನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ.
ಭಾರತ ಈಗಾಗಲೇ 2024ರಲ್ಲಿ ಟಿ20 ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿತ್ತು. ಇದೀಗ ಮತ್ತೆ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಇತಿಹಾಸ ನಿರ್ಮಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ಹಾಲಿ ಚಾಂಪಿಯನ್ ತಂಡ ಸತತ ಎರಡು ಬಾರಿ ಕಪ್ ಗೆದ್ದಿರುವುದಿಲ್ಲ. ಈ ದಾಖಲೆಯನ್ನು ಭಾರತ ಮೊದಲ ಬಾರಿ ಸಾಧಿಸಿದೆ.
ಇದಲ್ಲದೆ, ಟಿ20 ವಿಶ್ವಕಪ್ ಆಯೋಜಿಸಿದ ಆತಿಥೇಯ ರಾಷ್ಟ್ರವೇ ಟ್ರೋಫಿ ಗೆದ್ದ ಮೊದಲ ಉದಾಹರಣೆಯೂ ಇದಾಗಿದೆ. ಈ ಮೂಲಕ ಭಾರತ ಮತ್ತೊಂದು ಅಪೂರ್ವ ಸಾಧನೆ ಮಾಡಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಬಾರಿ ಟ್ರೋಫಿ ಗೆದ್ದ ತಂಡ ಎಂಬ ಹೆಗ್ಗಳಿಕೆಯನ್ನು ಕೂಡ ಭಾರತ ತನ್ನದಾಗಿಸಿಕೊಂಡಿದೆ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿ ಮೊದಲ ಟಿ20 ವಿಶ್ವಕಪ್ ಜಯಿಸಿತ್ತು. ಬಳಿಕ 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಎರಡನೇ ಬಾರಿ ಕಪ್ ಗೆದ್ದಿತ್ತು.
ಈಗ ನ್ಯೂಜಿಲ್ಯಾಂಡ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.



