ಕೆ.ಆರ್.ನಗರ : ತಾಲ್ಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಮುಖಂಡ ಹನಸೋಗೆ ನಾಗರಾಜು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು-ಕೊರತೆ ಸಭೆ ಕರೆದು ಮೂರು ವರ್ಷಗಳಾಗಿದ್ದು, ಈಗ ಕರೆದ ಸಭೆಯಲ್ಲಿ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಮುಖಂಡ ಸಿದ್ದಾಪುರ ಕಾಳಯ್ಯ ಮಾತನಾಡಿ, ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ಇರುವ ಕಾವೇರಿ ನದಿಯಿಂದ ಸುತ್ತಲಿನ 16 ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಆದರೆ ನದಿ ಪಕ್ಕದಲ್ಲಿಯೇ ಇರುವ ಸಿದ್ದಾಪುರ ದಲಿತರ ಕೇರಿಗೆ ಮಾತ್ರ ಏಕೆ ನೀರು ಸರಬರಾಜು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಚಂದಗಾಲು ರಾಚಯ್ಯ ಮಾತನಾಡಿ, ಚಂದಗಾಲು ಗ್ರಾಮದಲ್ಲಿ 30 ವರ್ಷಗಳಿಂದ ನಿವೇಶನ ಸಮಸ್ಯೆ ಬಗೆಹರಿಸಲಾಗಿಲ್ಲ, ಆಶ್ರಯ ನಿವೇಶನಕ್ಕೆ ಸಂಬಂಧಿಸಿದಂತೆ ಹಕ್ಕುಪತ್ರ ನೀಡಿ ಕೂಡಲೇ ಸಮಸ್ಯೆ ಬಗೆ ಹರಿಸಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ವಿ.ಪಿ.ಕುಲದೀಪ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಂಕರಮೂರ್ತಿ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಕೃಷಿ, ಅರಣ್ಯ, ಸಾಮಾಜಿಕ ಅರಣ್ಯ, ಲೋಕೋಪಯೋಗಿ, ಅಬಕಾರಿ, ಮೀನುಗಾರಿಕೆ, ಶಾಲಾ ಶಿಕ್ಷಣ ಇಲಾಖೆ, ರೇಷ್ಮೆ, ಸೆಸ್ಕ್, ಪಶುವೈದ್ಯ, ಸಹಕಾರ ಇಲಾಖೆ, ಪುರಸಭೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಮುಖಂಡರಾದ ಸಿದ್ದಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಮುಖಂಡರಾದ ಎಂ.ಎಚ್.ಸ್ವಾಮಿ, ಹಂಪಾಪುರ ಸುರೇಶ್, ಡಿ.ಕೆ.ಕೊಪ್ಪಲು ರಾಜಯ್ಯ, ಕಳ್ಳಿಮುದ್ದನಹಳ್ಳಿ ಚಂದ್ರು, ಗಳಿಗೆಕೆರೆ ಜಿ.ಕೆ.ತೋಟಪ್ಪನಾಯಕ, ಕೃಷ್ಣನಾಯಕ, ತಿಪ್ಪೂರು ಮಹದೇವನಾಯಕ, ಅರ್ಜುನಹಳ್ಳಿ ಮುತ್ತುರಾಜ್, ಹೊಸಅಗ್ರಹಾರ ಎಚ್.ಎಸ್.ಸ್ವಾಮಿ, ರಾಜಯ್ಯ, ಪುಟ್ಟಣ್ಣಯ್ಯ, ಹೊಸಕೋಟೆ ಚಲುವರಾಜ್, ವಜ್ರೇಶ್, ಕಗ್ಗೆರೆ ಬಸವೇಶ್, ವೆಂಕಟೇಶ್, ರಾಮಯ್ಯ ಸಭೆಯಲ್ಲಿ ಭಾಗವಹಿಸಿದ್ದರು.



