Saturday, March 28, 2026
Google search engine

Homeರಾಜ್ಯಸದನದಲ್ಲಿ ಐಪಿಎಲ್ ಟಿಕೆಟ್ ಗದ್ದಲ : ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಸದನದಲ್ಲಿ ಐಪಿಎಲ್ ಟಿಕೆಟ್ ಗದ್ದಲ : ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬೆಂಗಳೂರು : ಬೆಂಗಳೂರಿನಲ್ಲಿ ಐಪಿಎಲ್ ಕ್ರೇಜ್ ಆರಂಭವಾಗುತ್ತಿದ್ದಂತೆಯೇ, ಇತ್ತ ಸದನದಲ್ಲೂ ಟಿಕೆಟ್ ಕಿರಿಕ್ ಶುರುವಾಗಿದ್ದು, ನಾವು ಜನಪ್ರತಿನಿಧಿಗಳು, ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯಲು ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆಗೆ ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ವಿಧಾನಸಭೆಯಲ್ಲಿ ಕೆಎಸ್‌ಸಿಎ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನಾವು ಜನಪ್ರತಿನಿಧಿಗಳು, ನಮಗೆ ಕನಿಷ್ಠ ಗೌರವ ಕೊಡಬೇಕು. ಕಳೆದ ಬಾರಿ ನಮ್ಮನ್ನು ಸಾಮಾನ್ಯ ಗ್ಯಾಲರಿಯಲ್ಲಿ ಕೂರಿಸಲಾಗಿತ್ತು. ಕೆಎಸ್‌ಸಿಎ ಸಂಸ್ಥೆಯು ಸರ್ಕಾರದಿಂದ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತದೆ, ಆದರೆ ಶಾಸಕರಿಗೆ ಟಿಕೆಟ್ ನೀಡಲು ಮಾತ್ರ ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಆನ್‌ಲೈನ್ ಟಿಕೆಟ್ ದಂಧೆಯ ಬಗ್ಗೆಯೂ ಆರೋಪ ಮಾಡಿರುವ ಅವರು, ಅಲ್ಲಿ ಬ್ಲಾಕ್ ಮಾರ್ಕೆಟ್ ನಡೆಯುತ್ತಿದೆ ಎಂದು ಗಂಭೀರವಾಗಿ ದೂರಿದ್ದಾರೆ. ವಿಶೇಷವೆಂದರೆ ಕಾಶಪ್ಪನವರ್ ಅವರ ಈ ಬೇಡಿಕೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡ ದನಿಗೂಡಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಆಕ್ರೋಶ : ಶಾಸಕರ ಈ ವಿಐಪಿ ಟಿಕೆಟ್ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದ್ದಾರೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಸದನದಲ್ಲಿ ಐಪಿಎಲ್ ಟಿಕೆಟ್‌ಗಾಗಿ ಪಟ್ಟು ಹಿಡಿಯುವುದು ವಿಧಾನಸೌಧದ ಘನತೆಗೆ ತಕ್ಕುದಲ್ಲ. ಜನಸಾಮಾನ್ಯರು ಕಷ್ಟಪಟ್ಟು ಹಣ ನೀಡಿ ಟಿಕೆಟ್ ಖರೀದಿಸುವಾಗ ಶಾಸಕರಿಗೆ ಮಾತ್ರ ಯಾಕೆ ಉಚಿತವಾಗಿ ನೀಡಬೇಕು? ಇದು ಜನಪ್ರತಿನಿಧಿಗಳ ಅಹಂಕಾರದ ಪರಮಾವಧಿ ಎಂದು ಖಂಡಿಸಿದ್ದಾರೆ.

ಆದರೆ, ಈ ವಿವಾದದಲ್ಲಿ ಶಾಸಕರ ಬೆಂಬಲಕ್ಕೆ ನಿಂತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರು ಸರ್ಕಾರದ ವ್ಯವಸ್ಥೆಯ ಒಂದು ಭಾಗ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ಈ ಬಗ್ಗೆ ಕೆಎಸ್‌ಸಿಎ ಪದಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ತೇಜಸ್ವಿ ಸೂರ್ಯ ಅವರ ಟೀಕೆಗೆ ತಿರುಗೇಟು ನೀಡಿರುವ ಡಿಕೆಶಿ, ಸೂರ್ಯ ಅವರು ಮೊದಲು ತಮ್ಮ ಪಕ್ಷದ ಶಾಸಕರಿಗೆ ಬುದ್ಧಿ ಹೇಳಲಿ ಎಂದು ಲೇವಡಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular