ಕೆ.ಆರ್.ನಗರ : ಸರ್ಕಾರಿ ಶಾಲೆಗಳ ಉಳಿವಿಗೆ ಪೋಷಕರು ಮತ್ತು ಸಾರ್ವಜನಿಕರು ಕಂಕಣ ಬದ್ದರಾಗಿ ಕೆಲಸ ಮಾಡಿ ಆ ಮೂಲಕ ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ನನ್ನ ಶಾಲೆ ನನ್ನ ಹೆಮ್ಮೆ ಅಕ್ಷರ ಕಲಿಸಿದ ಮಣ್ಣಿಗೆ ನವ ಕನಸುಗಳ ಸಾಕ್ಷಾತ್ಕಾರಕ್ಕಾಗಿ ಎಂಬ ವಿನೂತ ಕಾರ್ಯಕ್ರಮದಡಿ ನಂದಿ ಇನ್ಸಫ್ರಾಸ್ಟ್ರಕ್ಚರ್ ವತಿಯಿಂದ ನೂತನವಾಗಿ ನಿರ್ಮಾಣ ಮಾಡುತ್ತಿರುವ ನಂದಿ ಸರ್ಕಾರಿ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಚೀರ್ನಹಳ್ಳಿ ಗ್ರಾಮದ ಹೆಮ್ಮೆ ಪುತ್ರನಾಗಿರುವ ನೈಸ್ ಸಂಸ್ಥೆಯ ಉಪಾಧ್ಯಕ್ಷ ಟಿ.ಮಹದೇವ್ ಸಂಸ್ಥೆಯ ಸಹಯೋಗ ಮತ್ತು ವೈಯುಕ್ತಿಕ ವೆಚ್ಚದಲ್ಲಿ 2.70 ಕೋಟಿರೂ ಹಣ ವ್ಯಯಿಸಿ ಶಾಲಾ ಕಟ್ಟಡ ನಿರ್ಮಾಣ ಮಾಡಿಸಿಕೊಡುತ್ತಿರುವುದು ಸಮಾಜವೇ ಹೆಮ್ಮೆ ಪಡುವ ವಿಚಾರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಿಕ್ಷಣದಿಂದ ಸರ್ವರ ಉದ್ದಾರ ಸಾಧ್ಯ ಎಂದು ಧ್ಯೇಯ ಅರಿತಿರುವ ಮಹದೇವ್ ಗ್ರಾಮದ ಮಕ್ಕಳ ಅನುಕೂಲಕ್ಕಾಗಿ ಮಾದರಿ ಶಾಲೆ ನಿರ್ಮಾಣಕ್ಕೆ ಹೊರಟಿರುವುದು ಪ್ರಶಂಸನೀಯ ಎಂದರಲ್ಲದೆ ಇಂತಹ ಕೆಲಸ ಮಾಡುವವರ ಹಿಂದೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು ಎಂದು ನುಡಿದರು.

ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಮಾದರಿಯಾದ ಕೆಲಸ ಮಾಡಿ ಸುಂದರ ಮತ್ತು ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳ ಜ್ಞಾನ ದಾಸೋಹಕ್ಕೆ ನೀರೆರೆಯುತ್ತಿರುವ ಇಂತಹವರ ಸಂತತಿ ನೂರ್ಮಡಿಯಾಗಲಿ ಎಂದು ಆಶಿಸಿದರು.
ಶಾಲೆಯ ಆವರಣದಲ್ಲಿ ಕುಡಿಯುವ ನೀರಿನ ಅನುಕೂಲಕ್ಕಾಗಿ ಬೋರ್ ವೆಲ್ ಕೊರೆಸುವುದರ ಜತೆಗೆ ಕಾಂಪೌಂಡ್ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾತನಾಡಿ ಶಿಕ್ಷಣ ಕಲಿತರೆ ಸಮಾಜದಲ್ಲಿ ಎಲ್ಲವನ್ನು ಸಾಧಿಸಲು ಸಾಧ್ಯವಾಗಲಿದ್ದು ಅಂತಹ ಸಾಧನೆ ಮಾಡುವವರಿಗೆ ನೆರವಾಗುವ ಉದ್ದೇಶದಿಂದ ತಮ್ಮ ಹುಟ್ಟೂರಿನಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಲು ಮುಂದಾಗಿರುವ ಟಿ.ಮಹದೇವ್ ಅವರ ಸೇವಾ ಮನೋಭಾವನೆ ಇತರರಿಗೆ ಆದರ್ಶನೀಯ ಎಂದರು.
ಬಿಇಒ ಆರ್.ಕೃಷ್ಣಪ್ಪ ಮಾತನಾಡಿ ಚೀರ್ನಹಳ್ಳಿ ಗ್ರಾಮದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನಲ್ಲಿಯೇ ಮಾದರಿಯಾದ ನಂದಿ ಸರ್ಕಾರಿ ಪಬ್ಲಿಕ್ ಶಾಲೆ ನಿರ್ಮಾಣ ಮಾಡಿಸಿಕೊಡುತ್ತಿರುವ ಟಿ.ಮಹದೇವ್ ಅವರ ಕಾರ್ಯ ಶ್ಲಾಘನೀಯ ಎಂದರಲ್ಲದೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಎಲ್ ಕೆ ಜಿ, ಯುಕೆಜಿ ಮತ್ತು ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಪ್ರಕಟಿಸಿದರು.
ನೈಸ್ ಸಂಸ್ಥೆ ಉಪಾಧ್ಯಕ್ಷ ಟಿ.ಮಹದೇವ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಮುಖಂಡ ಸಿ.ಟಿ.ಶಿವರಾಜು, ಇಸಿಒ ಜನಾರ್ಧನ್, ಸಿಆರ್ ಪಿ ಧನಂಜಯ್, ಮುಖ್ಯಶಿಕ್ಷಕಿ ಅನಿತಾ, ಮುಖಂಡರಾದ ಕುಮಾರ್, ಮಹದೇವ್, ಕೃಷ್ಣ, ರವಿ, ಶಂಕರ್, ಮಣಿಯಮ್ಮ, ನೇತ್ರಾವತಿಕುಂಟೇಗೌಡ, ಸುಧಾಕರ್, ಎಸ್ ಡಿಎಂಸಿ ಅಧ್ಯಕ್ಷ ಪುರುಷೋತ್ತಮ್, ಮಾಜಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕೆ.ಆರ್.ನಗರ : ಗ್ರಾಮಗಳಲ್ಲಿ ದೇವಾಲಯ ನಿರ್ಮಾಣ ಮಾಡಿದರೆ ಆಯ್ದ ಕುಟುಂಬಕ್ಕೆ ಮತ್ತು ಕೆಲವರಿಗೆ ಅನುಕೂಲವಾಗುತ್ತದೆ ಆದರೆ ಸರ್ಕಾರಿ ಶಾಲೆಗಳ ಉದ್ದಾರವಾದರೆ ಸರ್ವರಿಗೂ ಆಸರೆಯಾಗುತ್ತದೆ ಎಂಬ ಸದುದ್ದೇಶದಿಂದ ಗ್ರಾಮದಲ್ಲಿ 2.75 ಕೋಟಿ ವೆಚ್ಚದಲ್ಲಿ ಮಾದರಿಯಾದ ಶಾಲಾ ಕಟ್ಟಡ ನಿರ್ಮಾಣ ಮಾಡಿಸಲು ಮುಂದಾಗಿದ್ದೇನೆ ಎಂದು ನೈಸ್ ಸಂಸ್ಥೆಯ ಉಪಾಧ್ಯಕ್ಷ ಟಿ
ಮಹದೇವ್ ಹೇಳಿದರು.
ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ನನ್ನ ಶಾಲೆ ನನ್ನ ಹೆಮ್ಮೆ ಅಕ್ಷರ ಕಲಿಸಿದ ಮಣ್ಣಿಗೆ ನವ ಕನಸುಗಳ ಸಾಕ್ಷಾತ್ಕಾರಕ್ಕಾಗಿ ಎಂಬ ವಿನೂತ ಕಾರ್ಯಕ್ರಮದಡಿ ನಂದಿ ಇನ್ಸಫ್ರಾಸ್ಟ್ರಕ್ಚರ್ ವತಿಯಿಂದ ನೂತನವಾಗಿ ನಿರ್ಮಾಣ ಮಾಡುತ್ತಿರುವ ನಂದಿ ಸರ್ಕಾರಿ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶಾಲಾ ಕಟ್ಟಡದಲ್ಲಿ 9 ಕೊಠಡಿಗಳು, ಸೇರಿದಂತೆ ಸಭಾಭವನ, ಮುಖ್ಯಶಿಕ್ಷಕರ ಕೊಠಡಿ, ದಾಸೋಹ ಭವನ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಗ್ರಂಥಾಲಯ ಸೇರಿದಂತೆ ಇನ್ನಿತರ ಎಲ್ಲಾ ಅಗತ್ಯ ಸವಲತ್ತುಗಳನ್ನು ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಉಳ್ಳವರು ಅನಗತ್ಯವಾಗಿ ಹಣ ದುಂದುವೆಚ್ಚ ಮಾಡುವ ಬದಲು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಜತೆಗೆ ಶೈಕ್ಷಣಿಕ ಏಳಿಗೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಸಲಹೆ ನೀಡಿದ ಅವರು ನಾನು ಮಾಡುತ್ತಿರುವ ಈ ಸಮಾಜ ಮುಖಿ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಕೋರಿಕೊಂಡರು.



