ಕೆ.ಆರ್.ಪೇಟೆ : ತಾಲ್ಲೂಕಿನ ಸಾಕ್ಷಿಬೀಡು ಗ್ರಾಮದಲ್ಲಿ ರೈತ ಹರೀಶ್ ಎಂಬುವರ ಜಮೀನಿನ ಮಧ್ಯದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿಯಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಹರೀಶ್ ಅವರಿಗೆ ಸೇರಿದ್ದ 2 ಎಕರೆ ಕಬ್ಬು ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಹೋದ ರೈತ ಹರೀಶ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಕ್ಷಿಬೀಡು ಗ್ರಾಮದ ರೈತ ಹರೀಶ್ ಅವರಿಗೆ ಸೇರಿದ ಜಮೀನಿನ ಮಧ್ಯದಲ್ಲೇ ವಿದ್ಯುತ್ ಲೈನ್ ಹಾದುಹೋಗಿತ್ತು ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ಆಗಿ ಕಿಡಿ ಬಿದ್ದು ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿ ಕಟಾವಿಗೆ ಬಂದಿದ್ದ 11 ತಿಂಗಳ 2 ಎಕರೆ ಕಬ್ಬು ಸಂಪೂರ್ಣ ಭಸ್ಮವಾಗಿದೆ.ಬೆಂಕಿ ಕಾಣುತ್ತಿದ್ದಂತೆ ಧಾವಿಸಿದ ರೈತ ಹರೀಶ್ ಬೆಂಕಿ ನಂದಿಸಲು ಮುಂದಾದಾಗ ಕೈ, ಕಾಲುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಹರೀಶ್ ಅವರನ್ನು ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪೇಟೆ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸುಮಾರು 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು. ಆದರೆ ಅಷ್ಟರಲ್ಲಾಗಲೇ 2 ಎಕರೆ ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ. ಸುಟ್ಟು ಹೋದ ಕಬ್ಬಿನಿಂದ ರೈತ ಹರೀಶ್ ಅವರಿಗೆ ಅಂದಾಜು 3 ಲಕ್ಷ ರೂಪಾಯಿ ನಷ್ಟವಾಗಿದೆ. ಸಾಲ ಮಾಡಿ ಕಬ್ಬು ಬೆಳೆದಿದ್ದ ರೈತ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ರೈತನ ಬದುಕು ಬೀದಿಗೆ ಬಿದ್ದಿದೆ.ಚೆಸ್ಕಾಂ ಇಲಾಖೆ ತಕ್ಷಣ ರೈತನಿಗೆ ಪರಿಹಾರ ನೀಡಿ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ



