ಕೆ.ಆರ್.ನಗರ : ಡಾ.ಬಾಬು ಜಗಜೀವನ್ ರಾಂ ಜಯಂತಿಯನ್ನು ಏ.5 ರಂದು ಪಟ್ಟಣದ ಪುರಸಭೆ ವೃತ್ತದಲ್ಲಿ ಸರಳವಾಗಿ ಆಚರಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾ.ಪಂ.ಕೃಷ್ಣ ರಾಜೇಂದ್ರ ಸಭಾಂಗಣದಲ್ಲಿ ನಡೆದ ಡಾ.ಬಾಬು ಜಗಜೀವನ್ ರಾಂ, ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಸಿರು ಕ್ರಾಂತಿಯ ಹರಿಕಾರನಿಗೆ ಅಂದು ಗೌರವ ಸಲ್ಲಿಸಿ ಪೂಜಿಸಲಾಗುತ್ತದೆ ಎಂದರು.
ಪುರಸಭೆಯ ವೃತ್ತದಲ್ಲಿ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡುವುದರ ಜತೆಗೆ ಬರುವವರಿಗೆ ಉಪಹಾರದ ವ್ಯವಸ್ಥೆ ಮಾಡಿ ವೃತ್ತ ಮತ್ತು ಪ್ರತಿಮೆಯನ್ನು ತರಿಳು ತೋರಣ ಮತ್ತು ಬಗೆ ಬಗೆಯ ಹೂಗಳಿಂದ ಅಲಂಕಾರ ಮಾಡಬೇಕು ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಜಯಂತಿ ಆಚರಣೆ ಹಿನ್ನಲೆಯಲ್ಲಿ ಏ.4 ಮತ್ತು 5 ರಂದು ವಿದ್ಯುತ್ ದೀಪಾಲಂಕಾರ ಮಾಡಿಸಿ ಫ್ಲೆಕ್ಸ್ ಅಳವಡಿಸಬೇಕೆಂದ ಶಾಸಕರು ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಬೇಕೆಂದು ಆದೇಶಿಸಿದರು.
ಏ.5 ರಂದು ಸರಳವಾಗು ಬಾಬು ಜಗಜೀವನ್ ರಾಂ ಜಯಂತಿ ಆಚರಣೆ ಮಾಡಿದ ನಂತರ ಆ ಸಮಾಜದ ಮುಖಂಡರು ಮತ್ತು ಹಿರಿಯ ಸಲಹೆ ಮತ್ತುಮಾರ್ಗದರ್ಶನ ಪಡೆದು ಮತ್ತೊಂದು ದಿನಾಂಕದಂದು ಅದ್ದೂರಿಯಾಗಿ ಜಯಂತಿ ಆಚರಿಸುವುದಾಗಿ ಡಿ.ರವಿಶಂಕರ್ ಪ್ರಕಟಿಸಿದರು.
ಡಾ.ಬಿ.ಆರ್.ಆಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಮತ್ತೊಂದು ಸಭೆ ನಡೆಸಿ ಆ ಸಮಾಜದ ಮುಖಂಡರು ಮತ್ತು ಪ್ರಮುಖರ ಸಲಹೆ ಪಡೆದು ತೀರ್ಮಾನ ಮಾಡುವುದಾಗಿ ಘೋಷಣೆ ಮಾಡಿದರು.
ತಾ.ಪಂ.ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಸದಸ್ಯ ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಕಾಳಯ್ಯ, ಎಂ.ಲೋಕೇಶ್, ಬಿ.ಹೆಚ್.ಕುಮಾರ್, ಮಂಜು, ಎಂ.ಟಿ.ರಾಜೇಶ್, ರಮೇಶ್, ಕಾಂತರಾಜು, ಶಿವು, ವಜ್ರೇಶ್, ನಾಗಣ್ಣ ಮತ್ತಿತರರು ಮಾತನಾಡಿ ಜಯಂತಿ ಆಚರಣಾ ಸಂಬಂಧ ಅಗತ್ಯ ಸಲಹೆ ಸೂಚನೆ ನೀಡಿದರು.
ತಹಶೀಲ್ದಾರ್ ಗಳಾದ ಜಿ.ಸುರೇಂದ್ರಮೂರ್ತಿ, ರುಕಿಯಾಬೇಗಂ, ತಾ.ಪಂ.ಇಒ ಗಳಾದ ವಿ.ಪಿ.ಕುಲದೀಪ್, ಎ.ಎನ್.ರವಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಸ್.ಮಹೇಶ್, ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಪಂಚಾಯತ್ ರಾಜ್ ಕಾರ್ಯಪಾಲಕ ಅಭಿಯಂತರ ಕೆ.ಆನಂದ್, ಸಹಾಯಕ ಪಶು ನಿರ್ದೇಶಕ ರಾಮು, ಅರಣ್ಯಾಧಿಕಾರಿ ಟಿ.ವಿ.ಹರಿಪ್ರಸಾದ್, ಮೀನುಗಾರಿಕೆ ಇಲಾಖೆಯ ಶಿವರಂಜನ್, ಬಿಇಒ ಆರ್.ಕೃಷ್ಣಪ್ಪ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಕೃಷಿ ಇಲಾಖೆಯ ಕೆ.ಜೆ.ಮಲ್ಲಿಕಾರ್ಜುನ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ಸಿದ್ದೇಶ್ವರ ಪ್ರಸಾದ್, ಆರಕ್ಷಕ ಉಪನಿರೀಕ್ಷ ಆರ್.ಸ್ವಾಮಿಗೌಡ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಮೂರ್ತಿ, ಕಾರ್ಮಿಕ ನಿರೀಕ್ಷಕ ಗೋವಿಂದರಾಜ್ ಯಾದವ್ ಮತ್ತಿತರರು ಹಾಜರಿದ್ದರು.



