ಬೆಂಗಳೂರು : ಉಪಚುನಾವಣೆ ನಡೆಯುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅಭ್ಯರ್ಥಿಗಳ ಪರವಾಗಿ ಯಾರೇ ಬಂದು ಪ್ರಚಾರ ನಡೆಸಿದರೂ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರೆ ನೀವು ಒಪ್ಪುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ಯಾರೇ ಬಂದು ಪ್ರಚಾರ ಮಾಡಿದರೂ ಸ್ವಾಗತಿಸುತ್ತೇನೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಇನ್ನೂ ಯಾರೇ ಬಂದರೂ ಪ್ರಚಾರ ನಡೆಸಲು ಅವಕಾಶ ಇದೆ. ಅವರು ಪ್ರಚಾರಕ್ಕೆ ಬರಲಿ, ಸ್ವಾಗತ ಮಾಡುತ್ತೇವೆ. ನಮಗೆ ಗೆಲುವು ಮುಖ್ಯವಾಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೂ ನಾನು ಇವತ್ತು ನಾಳೆ ದಾವಣಗೆರೆಯಲ್ಲಿ ಪ್ರಚಾರ ಮಾಡುತ್ತೇನೆ. ಏಪ್ರಿಲ್ 5, 6ರಂದು ಬಾಗಲಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರಕ್ಕೆ ಹೋಗುವೆ. ನನಗೆ ನೂರಕ್ಕೆ ನೂರು ವಿಶ್ವಾಸ ಇದೆ. ಎರಡೂ ಕಡೆಯೂ ದೊಡ್ಡ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಹಿತ ಮರೆತು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಅಜೀರ್ಣವಾಗುವಷ್ಟು ಬಹುಮತ ಕಾಂಗ್ರೆಸ್‌ಗೆ ಈಗಾಗಲೇ ಇದೆ. ಮತ್ತೊಮೆ ಚುನಾವಣೆ ಗೆದ್ದರೆ ಅಧಿಕಾದ ಮದದಿಂದ ಇನ್ನೂ ಹೆಚ್ಚು ಭ್ರಷ್ಟಾಚಾರಕ್ಕೆ ಅವಕಾಶ ಕೊಟ್ಟಂತೆ ಆಗುತ್ತದೆ. ಅದಕ್ಕಾಗಿ ಎರಡೂ ಕಡೆಯೂ ಮತದಾರರು ಈ ಬಾರಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಇಡೀ ಸರ್ಕಾರವೇ ಉಪಚುನಾವಣೆ ಪ್ರಚಾರದಲ್ಲಿದ್ದು, ಸ್ವತಃ ಸಿಎಂ ಅವರೇ ನಾಲ್ಕೈದು ದಿನ ಅಲ್ಲಿ ಹೋಗಿ ಕೂತಿದ್ದಾರೆ. ಅದರರ್ಥ ಚುನಾವಣಾ ಸೋಲಿನ ಭಯ ಅವರಿಗೆ ಕಾಡುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಹಿಂದಿ ಭಾಷೆ ಕಡ್ಡಾಯ ಇಲ್ಲ ಎಂಬ ಸರ್ಕಾರದ ತೀರ್ಮಾನವನ್ನು ಖಂಡಿಸಿದ ಯಡಿಯೂರಪ್ಪ, ನಾನು ಆ ಬಗ್ಗೆ ಸದ್ಯಕ್ಕೆ ಏನೂ ಮಾತಾಡಲು ಇಷ್ಟಪಡುವುದಿಲ್ಲ. ದೇಶದ ಉದ್ದಗಲಕ್ಕೆ ಹಿಂದಿ ಭಾಷೆ ಇಲ್ಲದಿದ್ದರೆ ಬೇರೆ ಭಾಷೆಯಲ್ಲಿ ಮಾತಾಡಲು ಬರುವುದಿಲ್ಲ. ಹಿಂದಿ ಮಾತನಾಡುವುದನ್ನು, ಹಿಂದಿ ಭಾಷೆ ಕಲಿಯುವುದನ್ನು ತಪ್ಪು ಎಂದರೆ ನಾನು ಒಪ್ಪುವುದಿಲ್ಲ ಎಂದರು.
ಕೆಲವರು ಹಿಂದಿ ಬಗ್ಗೆ ತಮದೇ ಆದ ಮಾತುಗಳನ್ನಾಡುತ್ತಾರೆ. ಇದು ಕನ್ನಡಕ್ಕೆ ಮಾಡುವ ದ್ರೋಹ ಅಲ್ಲ. ಕನ್ನಡಿಗರಲ್ಲಿ ವಿನಂತಿ ಮಾಡುತ್ತೇನೆ. ಹಿಂದಿ ಭಾಷೆ ಕಲಿಯುವುದರಿಂದ ಕನ್ನಡ ಭಾಷೆಗೆ ಆಘಾತ ಆಗುವುದಿಲ್ಲ. ದಯಮಾಡಿ ಇದರ ಬಗ್ಗೆ ಗೊಂದಲ ಉಂಟು ಮಾಡುವ ಕೆಲಸ ಮಾಡಬಾರದು ಎಂದರಲ್ಲದೆ ಶಾಸಕ ಎಸ್.ಟಿ.ಸೋಮಶೇಖರ್ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಯಾವುದು ಗೊತ್ತಿಲ್ಲಪ್ಪ ಎಂದು ಹೇಳಿದರು.



