Thursday, April 2, 2026
Google search engine

Homeರಾಜ್ಯಕಾನೂನು ಸುವ್ಯವಸ್ಥೆ ಕಾಪಾಡಲು ತಂತ್ರಜ್ಞಾನ ಬಳಕೆ ಅಗತ್ಯ : ಸಿಎಂ ಸಿದ್ದರಾಮಯ್ಯ

ಕಾನೂನು ಸುವ್ಯವಸ್ಥೆ ಕಾಪಾಡಲು ತಂತ್ರಜ್ಞಾನ ಬಳಕೆ ಅಗತ್ಯ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪೊಲೀಸರು ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಅಪರಾಧ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಕೋರಮಂಗಲದ ಕೆಎಸ್ಆರ್‌ಪಿ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿದ 158 ಪೊಲೀಸ್ ಸಿಬ್ಬಂದಿಗಳಿಗೆ ಪದಕ ನೀಡಿ ಗೌರವಿಸಿದರು. ಪದಕ ಪಡೆದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ ಅವರು, ಪೊಲೀಸರು ದಿನದ 24 ಗಂಟೆಯೂ ಸಾರ್ವಜನಿಕರ ರಕ್ಷಣೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಮಾದಕ ವಸ್ತುಗಳ ಮಾರಾಟ ಮತ್ತು ಜಾಲದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಎಂ, ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಗೆ ತಿಳಿಯದಂತೆ ಅಪರಾಧ ಕೃತ್ಯಗಳು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳು ಹೆಚ್ಚು ಜಾಗರೂಕರಾಗಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು. ಪ್ರತಿಯೊಂದು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಜನಸ್ನೇಹಿಯಾಗಿದ್ದುಕೊಂಡು, ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸುಲಭವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಪೊಲೀಸರ ಕರ್ತವ್ಯ ನಿಷ್ಠೆಯನ್ನು ಗೌರವಿಸಲಾಯಿತು.

RELATED ARTICLES
- Advertisment -
Google search engine

Most Popular