ಬೆಂಗಳೂರು : ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಕೇಂದ್ರ ಬಜೆಟ್ ಗಿಂತ ರಾಜ್ಯದ ಬಜೆಟ್ ಉತ್ತಮವಾಗಿದೆ ಎಂದು ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಕೇಂದ್ರ ಬಜೆಟ್‌ಗಿಂತ ರಾಜ್ಯದ ಬಜೆಟ್ ಉತ್ತಮವಾಗಿದ್ದು, ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿಯವರು ಗ್ಯಾರಂಟಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ, ಖಜಾನೆ ಖಾಲಿಯಾಗುತ್ತದೆ ಎಂದು ಟೀಕಿಸುತ್ತಾರೆ. ಆದರೆ ಜನರ ಖಾತೆಗೆ ನೇರವಾಗಿ ಹಣ ತಲುಪುದರಿಂದ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಅಂದರೆ 2023ರ ಮಾರ್ಚ್ ವರೆಗೆ 530000 ಕೋಟಿಗೂ ಹೆಚ್ಚು ಸಾಲ ಮಾಡಿದ್ದರೆ, ನಮ್ಮ ಕಾಂಗ್ರೆಸ್ ಸರ್ಕಾರ, ಕಳೆದ ನಾಲ್ಕು ವರ್ಷದಲ್ಲಿ 256000 ಕೋಟಿ ರೂ. ಸಾಲ ಮಾಡಿದೆ. ಅಂತೆಯೇ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ದೇಶದ ಮೇಲೆ 53.11 ಲಕ್ಷ ಕೋಟಿ ಸಾಲವಿತ್ತು. ಈಗ 218 ಲಕ್ಷ ಕೋಟಿ ಸಾಲವಿದೆ, ಅಂದರೆ ಪ್ರಧಾನಿ ಮೋದಿಯವರ 12 ವರ್ಷದ ಅಧಿಕಾರದ ಅವಧಿಯಲ್ಲಿ 165 ಲಕ್ಷ ಕೋಟಿಯಷ್ಟು ಸಾಲ ಮಾಡಿದ್ದಾರೆ.
ಈ ಸಂಖ್ಯೆಯು ಬಿಜೆಪಿ ಸರ್ಕಾರ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೆಚ್ಚು ಸಾಲ ಮಾಡಿದೆ ಎಂಬುದನ್ನು ಸೂಚಿಸುತ್ತದೆ ಎಂದರಲ್ಲದೆ, ಬಿಜೆಪಿಯವರು ಬಡವರ ಯೋಜನೆಗಳಾದ ಗ್ಯಾರಂಟಿಗಳನ್ನು ವಿರೋಧಿಸುತ್ತಾರೆ. ಒಟ್ಟು ಗ್ಯಾರಂಟಿ ಯೋಜನೆಗೆ ಸುಮಾರು 1,31,000 ಕೋಟಿ ರೂ.ಗಳನ್ನು ನಾವು ವ್ಯಯ ಮಾಡಿ ಜನ ಸಾಮಾನ್ಯರ ಬದುಕಿಗೆ ಅರ್ಪಿಸಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರ ಒಂದರಲ್ಲಿ 535 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಯೂನಿವರ್ಸಲ್ ಬೇಸಿಕ್ ಇನ್ಕಂ ತತ್ವದಲ್ಲಿ ನಂಬಿಕೆಯಿರಿಸಿ, ತಳ ಸಮುದಾಯದವರಿಗೆ ಅನುಕೂಲ ಕಲ್ಪಿಸುತ್ತಿದೆ. ಸಮಾಜದ ಕಟ್ಟಕಡೆಯ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯ ಎಂದರು.
ಇನ್ನೂ ಎಲ್‌ಪಿಜಿ ಸಿಲಿಂಡರ್‌ಗೆ 414 ರೂ. ಇದ್ದದ್ದು, ಪ್ರಧಾನಿ ಮೋದಿಯವರು ಬಂದ ನಂತರ ಈಗ ಸುಮಾರು 1 ಸಾವಿರವಾಗಿದೆ. ಅಂತೆಯೇ ಪೆಟ್ರೋಲ್, ಡೀಸೆಲ್‌ನ ದರವನ್ನೂ ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಬೆಲೆ ಏರಿಕೆಯನ್ನು ಹೋಲಿಸಿದರೆ, ರಾಜ್ಯದಲ್ಲಿ ಗಣನೀಯವಾಗಿ ಬೆಲೆಗಳು ಕಡಿಮಿಯಿದೆ. ಆದ್ದರಿಂದ ಕರ್ನಾಟಕದ ಹಣಕಾಸಿನ ಸ್ಥಿತಿ ಸುಭದ್ರವಾಗಿದ್ದು, ಬಿಜೆಪಿಯವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.



