ಮೈಸೂರು : ಆರ್‌ಎಸ್ಎಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು 21ನೇ ಶತಮಾನದ ಮೊಹಮ್ಮದ್ ಅಲಿ ಜಿನ್ನಾ ಅವರಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಮುಸ್ಲಿಂ ಲೀಗ್ ಅಧ್ಯಕ್ಷರಾಗಿದ್ದರು, ಈಗ ಮಲ್ಲಿಕಾರ್ಜುನ ಖರ್ಗೆ ಅವರು ಮುಸ್ಲಿಂ ಲೀಗ್ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ. ದೇಶಾದ್ಯಂತ ಕೋಮು ದಳ್ಳುರಿ ಸೃಷ್ಟಿಸಲು ಖರ್ಗೆ ಅವರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಆರ್‌ಎಸ್ಎಸ್ ಬಗ್ಗೆ ಮಾತನಾಡದಿದ್ದರೆ ಖರ್ಗೆ ತಂದೆ-ಮಗನಿಗೆ ತಿಂದಿದ್ದು ಕರಗುವುದಿಲ್ಲ. ಮರಿ ಖರ್ಗೆಗೆ ಹಿಡಿದಿದ್ದ ಆರ್‌ಎಸ್ಎಸ್ ಹುಚ್ಚು ಈಗ ಅಪ್ಪನಿಗೂ ಅಂಟಿಕೊಂಡಿದೆ. ಬಹುಶಃ ತಮ್ಮ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಅವರು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿರಬಹುದು ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು. ಆರ್‌ಎಸ್ಎಸ್ ಅನ್ನು ಕಟ್ಟಿ ಬೆಳೆಸಿರುವುದು ಹಿಂದೂಗಳು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸಂಘವನ್ನು ಟೀಕಿಸುವ ಭರದಲ್ಲಿ ಪರೋಕ್ಷವಾಗಿ ಹಿಂದೂಗಳನ್ನೇ ವಿಷ ಸರ್ಪ ಎಂದು ಕರೆದಿದ್ದಾರೆ.
ಅತ್ತ ಸಿಎಂ ಸಿದ್ದರಾಮಯ್ಯ ಅವರಿಗಿಂತಲೂ ಮಲ್ಲಿಕಾರ್ಜುನ ಖರ್ಗೆ ಅವರು ಮುಸ್ಲಿಂ ಓಲೈಕೆಯಲ್ಲಿ ಮುಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಖರ್ಗೆ ಅವರ ಕುಟುಂಬದ ಹಳೆಯ ಕಹಿ ಘಟನೆಯನ್ನು ನೆನಪಿಸಿದ ಪ್ರತಾಪ್ ಸಿಂಹ, ಅಂದು ಮುಸ್ಲಿಮರೇ ಮಲ್ಲಿಕಾರ್ಜುನ ಖರ್ಗೆ ಅವರ ಇಡೀ ಕುಟುಂಬವನ್ನು ಸುಟ್ಟು ಹಾಕಿದ್ದರು. ಅಂದು ಖರ್ಗೆ ಅವರು ಮನೆಯಲ್ಲಿ ಇದ್ದಿದ್ದರೆ ಅವರು ಕೂಡ ಸುಟ್ಟು ಹೋಗುತ್ತಿದ್ದರು.
ಇಷ್ಟೆಲ್ಲಾ ಅನುಭವಿಸಿದ ನಂತರವೂ ಅಂತಹವರ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ನಿಂತಿರುವುದು ಶೋಚನೀಯ. ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಖರ್ಗೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಾಪ್ ಸಿಂಹ ಒತ್ತಾಯಿಸಿದರು.



