ಮೈಸೂರು : ಫಲವತ್ತಾದ ಭೂಮಿಯಲ್ಲಿ ನಿಮ್ಹಾನ್ಸ್ ಘಟಕ ತೆರೆಯಬಾರದು ಎಂದು ಪ್ರತಿಭಟನೆ ನಡೆಸಿದ ರೈತರು, ಕಾಮಗಾರಿ ಸ್ಥಗಿತಗೊಳಿಸಿ ಜೆಸಿಬಿಯನ್ನು ಸ್ಥಳದಿಂದ ತೆರಳುವಂತೆ ಮಾಡಿದರು. ಮೈಸೂರು ತಾಲೂಕಿನ ಗುಡುಮಾದನಹಳ್ಳಿ ಗ್ರಾಮದ 20 ಎಕರೆ ಪ್ರದೇಶದಲ್ಲಿ ನಿಮ್ಹಾನ್ಸ್ ಘಟಕ ಮಾಡಲು ಮುಂದಾಗಿರುವ ಜಿಲ್ಲಾಡಳಿತ, ಇಂದು ಜೆಸಿಬಿ ಮೂಲಕ ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಿತ್ತು. ವಿಷಯ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇದು ನಿಮ್ಹಾನ್ಸ್ ಆಸ್ಪತ್ರೆ ಕಟ್ಟಲು ಯೋಗ್ಯವಲ್ಲದ ಭೂಮಿ. ಪಕ್ಕದಲ್ಲಿರುವ ವಾಜಮಂಗಲದಲ್ಲಿ ಸರಕಾರಿ ಜಮೀನಿದ್ದು, ಅದು ವ್ಯವಸಾಯ ಮಾಡಲು ಯೋಗ್ಯವಲ್ಲದ ಭೂಮಿಯಾಗಿದೆ. ಅಲ್ಲಿಆಸ್ಪತ್ರೆ ಕಟ್ಟಿಕೊಳ್ಳಿ. ಆದರೆ, ಫಲವತ್ತಾಗಿರುವ ಜಮೀನನ್ನು ವಶಕ್ಕೆ ಪಡೆಯಬಾರದು ಎಂದು ಕಿಡಿಕಾರಿದರು. ಜೆಸಿಬಿ ಕೆಲಸ ತಡೆದು ವಾಪಸ್ ಹೋಗುವಂತೆ ಮಾಡಿದರು.
ವರ್ಷಪೂರ್ತಿ ನೀರು ಹರಿಯುವ, ತೇವಾಂಶ ಪ್ರದೇಶವಾಗಿದೆ. ಅಲ್ಲದೇ ಬೆಳೆ ಬೆಳೆಯಲು ಯೋಗ್ಯವಾದ ಜಾಗವಾಗಿರುವುದರಿಂದ ಈ ಅವೈಜ್ಞಾನಿಕ ಯೋಜನೆಯನ್ನು ಕೈಬಿಡಬೇಕು. ಫಲವತ್ತಾದ ಭೂಮಿಯಲ್ಲಿ ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆಸ್ಪತ್ರೆ ಹೆಸರಿನಲ್ಲಿ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳಲು ಹೋಗಬಾರದು, ಎಂದು ಕಿಡಿಕಾರಿದರು.
ಫಲವತ್ತಾದ ಭೂಮಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಮಂಜೂರು ಮಾಡಿರುವುದರಿಂದ 90 ದಿನಗಳಿಂದ ಹೋರಾಟ ಮಾಡುತ್ತಿದ್ದು, ಜಿಲ್ಲಾಡಳಿತ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು,’’ ಎಂದು ಆಗ್ರಹಿಸಿದರು. ಜಿಲ್ಲಾಡಳಿತ ಮತ್ತು ಸರಕಾರ ಉಳುಮೆ ಮಾಡುತ್ತಿರುವ ರೈತರ ಅಹವಾಲುಗಳು ಮತ್ತು ಬೇಡಿಕೆಗಳನ್ನು ಹೇಳಿಕೊಳ್ಳಲು ಸಭೆ ಕರೆಯಬೇಕು. ಅಧಿಲ್ಲಿವವರೆಗೂ ಕಾಮಗಾರಿ ಮಾಡಬಾರದು ಎಂದು ಒತ್ತಾಯಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಮೈಸೂರು ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್ ಮತ್ತು ತಾಲೂಕಿನ ರೈತ ಸಂಘದ ಕಾರ್ಯಕರ್ತರು ಮತ್ತು ರೈತರು ಪಾಲ್ಗೊಂಡಿದ್ದರು.



