Friday, April 10, 2026
Google search engine

Homeರಾಜ್ಯಸುದ್ದಿಜಾಲಮಣ್ಣು ಕುಸಿದು ಮೂವರು ಕಾರ್ಮಿಕರು ಸಾವು: ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವು: ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ (Landslide) ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುದ್ದ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವಿಗೀಡಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಬೇಸರ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೆ ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ ದುಃಖವಾಯಿತು. ಮೃತ ದುರ್ದೈವಿ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ, ಮಾಹಿತಿ ಪಡೆದಿದ್ದೇನೆ. ಕುಟುಂಬಕ್ಕೆ ಆಧಾರವಾಗಿದ್ದ ಜೀವಗಳು ಈ ಘಟನೆಯಲ್ಲಿ ಬಲಿಯಾಗಿದ್ದು ತೀವ್ರ ಬೇಸರವಾಗಿದೆ. ಮಾನವೀಯತೆ ನೆಲೆಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಹುಲಿಕಲ್ ಘಾಟ್‌ನ ಹೇರ್ ಪಿನ್ ಕ್ರಾಸ್ ಬಳಿ ಹಾನಿಯಾಗಿದ್ದ ಕಾಂಕ್ರೀಟ್ ತಡೆಗೋಡೆಯನ್ನು ದುರಸ್ತಿ ಮಾಡುವ ಕೆಲಸ ನಡೆಯುತ್ತಿತ್ತು. ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಹಠಾತ್ತನೆ ಗುಡ್ಡದ ಮಣ್ಣು ಕುಸಿದು ಬಿದ್ದಿದ್ದರಿಂದ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು.ಈ ಅವಘಡದಲ್ಲಿ ಇತರ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ್ದ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು. ಭಾರಿ ಮಣ್ಣನ್ನು ತೆರವುಗೊಳಿಸಿ ಶವಗಳನ್ನು ಹೊರತೆಗೆಯುವುದು ರಕ್ಷಣಾ ತಂಡಕ್ಕೆ ದೊಡ್ಡ ಸವಾಲಾಗಿತ್ತು. ಆದರೆ ಇಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಶಬ್ಬಿರ್ (40) ಎಂಬ ಕಾರ್ಮಿಕನ ಮೃತದೇಹ ಮಣ್ಣಿನ ಅಡಿಯಿಂದ ಪತ್ತೆಯಾಗಿದೆ. ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37) ಮತ್ತು ಹಾವೇರಿ ಜಿಲ್ಲೆಯ ರಾಜು (30) ಎಂಬುವವರ ಶವಗಳನ್ನು ಹೊರತೆಗೆಯಲಾಗಿತ್ತು.
ಪತ್ತೆಯಾದ ಮೂರೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES
- Advertisment -
Google search engine

Most Popular