ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಜಯಸಿಂಗ್ ರಜಪೂತ್ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ಪರಿಶೀಲನೆ ಕೈಗೊಂಡಿದ್ದಾರೆ. ಈ ವೇಳೆ ಸುಮಾರು ₹14 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಗರದ ಆಂಜನೇಯ ನಗರ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ಶೋಧ ಕಾರ್ಯದಲ್ಲಿ 6 ಕೆಜಿ ಚಿನ್ನ ಹಾಗೂ 5 ಕೆಜಿ ಬೆಳ್ಳಿ ಆಭರಣಗಳನ್ನು ಪತ್ತೆಹಚ್ಚಿದ್ದಾರೆ. ಇದಲ್ಲದೆ ₹3.12 ಕೋಟಿ ಬ್ಯಾಂಕ್ ಠೇವಣಿಯಿರುವುದು ಬೆಳಕಿಗೆ ಬಂದಿದೆ.
ಅಜಯಸಿಂಗ್ ರಜಪೂತ್ ಅವರು ಸವದತ್ತಿ, ಹುಕ್ಕೇರಿ ಮತ್ತು ಹುಬ್ಬಳ್ಳಿ ಸೇರಿದಂತೆ ವಿವಿಧೆಡೆಗಳಲ್ಲಿ ಒಟ್ಟು 18 ನಿವೇಶನಗಳನ್ನು ಹೊಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.



