ಇಸ್ಲಾಮಾಬಾದ್ : ಅಮೆರಿಕಾ ಮತ್ತು ಇರಾನ್ ನಡುವೆ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಮಹತ್ವದ ಶಾಂತಿ ಮಾತುಕತೆಗೂ ಮುನ್ನವೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಸಂದೇಶವೊಂದನ್ನು ರವಾನಿಸಿದ್ದಾರೆ. “ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದುವಂತಿಲ್ಲ, ಇದೇ ನಮ್ಮ ಮೊದಲ ಮತ್ತು ಕೊನೆಯ ಷರತ್ತು” ಎಂದು ಟ್ರಂಪ್ ಗುಡುಗಿದ್ದಾರೆ.
ಟ್ರಂಪ್ ನೀಡಿದ ಪ್ರಮುಖ ಸಂದೇಶಗಳು ಹೀಗಿದೆ
ಪರಮಾಣು ನಿಷೇಧವೇ ಮುಖ್ಯ : “ನೋ ನ್ಯೂಕ್ಲಿಯರ್ ವೆಪನ್ (ಪರಮಾಣು ಶಸ್ತ್ರಾಸ್ತ್ರ ಇರಬಾರದು) ಎಂಬುದೇ ಇಡೀ ಚರ್ಚೆಯ ಶೇ. 99ರಷ್ಟು ವಿಷಯವಾಗಿದೆ. ಯಾವುದೇ ಒಪ್ಪಂದ ಏರ್ಪಡಬೇಕಾದರೂ ಇರಾನ್ ಸಂಪೂರ್ಣವಾಗಿ ಪರಮಾಣು ಅಸ್ತ್ರ ತಯಾರಿಕೆಯಿಂದ ದೂರವಿರಬೇಕು” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಮುಕ್ತ : ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾದ ‘ಸ್ಟ್ರೆಟ್ ಆಫ್ ಹಾರ್ಮುಜ್’ ಮಾರ್ಗವನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಇರಾನ್ ಸಹಕರಿಸಲಿ ಅಥವಾ ಬಿಡಲಿ, ಅಮೆರಿಕಾ ತನ್ನ ಸ್ವಂತ ಬಲದಿಂದಲಾದರೂ ಈ ಮಾರ್ಗವನ್ನು ಮುಕ್ತವಾಗಿರಿಸಲಿದೆ ಎಂದು ಎಚ್ಚರಿಸಿದ್ದಾರೆ.
ಇಸ್ಲಾಮಾಬಾದ್ ತಲುಪಿದ ಜೆ.ಡಿ. ವ್ಯಾನ್ಸ್ ತಂಡ
ಶಾಂತಿ ಮಾತುಕತೆಯ ನೇತೃತ್ವ ವಹಿಸಲು ಅಮೆರಿಕಾದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ಉನ್ನತ ಮಟ್ಟದ ತಂಡ ಇಸ್ಲಾಮಾಬಾದ್ ತಲುಪಿದೆ. ಈ ತಂಡದಲ್ಲಿ ಟ್ರಂಪ್ ಅವರ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜಾರೆಡ್ ಕುಶ್ನರ್ ಕೂಡ ಇದ್ದಾರೆ. ಮಾತುಕತೆಯ ಬಗ್ಗೆ ಸಕಾರಾತ್ಮಕ ನಿರೀಕ್ಷೆ ಹೊಂದಿದ್ದರೂ, ಇರಾನ್ ಏನಾದರೂ ಹಠಕ್ಕೆ ಬಿದ್ದರೆ ಅಮೆರಿಕಾ ಕಠಿಣ ನಿಲುವು ತಳೆಯಲಿದೆ ಎಂದು ವ್ಯಾನ್ಸ್ ತಿಳಿಸಿದ್ದಾರೆ.
ಇರಾನ್ ನ ಪ್ರತಿಕ್ರಿಯೆ ಮತ್ತು ಷರತ್ತುಗಳು :
ಇರಾನ್ ಪರವಾಗಿ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಾತುಕತೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಇರಾನ್ ಅಮೆರಿಕಾದ ಮೇಲೆ ಅಪನಂಬಿಕೆ ವ್ಯಕ್ತಪಡಿಸಿದೆ.
ನಂಬಿಕೆಯ ಕೊರತೆ : “ಅಮೆರಿಕಾ ಈ ಹಿಂದೆಯೂ ನೀಡಿದ ಭರವಸೆಗಳನ್ನು ಮುರಿದಿದೆ, ಹಾಗಾಗಿ ಅವರನ್ನು ಸುಲಭವಾಗಿ ನಂಬಲು ಸಾಧ್ಯವಿಲ್ಲ” ಎಂದು ಗಾಲಿಬಾಫ್ ಹೇಳಿದ್ದಾರೆ.
ಮುಖ್ಯ ಬೇಡಿಕೆಗಳು : ಲೆಬನಾನ್ ನಲ್ಲಿ ತಕ್ಷಣ ಕದನ ವಿರಾಮ ಜಾರಿಯಾಗಬೇಕು ಮತ್ತು ವಿದೇಶಗಳಲ್ಲಿ ಸ್ಥಗಿತಗೊಳಿಸಲಾಗಿರುವ ಇರಾನ್ನ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಎಂಬುದು ಇರಾನ್ನ ಪ್ರಮುಖ ಬೇಡಿಕೆಗಳಾಗಿವೆ.
ಗೊಂದಲದ ಗೂಡು : ಲೆಬನಾನ್ ವಿಷಯವು ಈ ಶಾಂತಿ ಮಾತುಕತೆಯ ಭಾಗವಲ್ಲ ಎಂದು ಅಮೆರಿಕಾ ಮತ್ತು ಇಸ್ರೇಲ್ ವಾದಿಸುತ್ತಿರುವುದು ಈಗ ಚರ್ಚೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಈ ಮಾತುಕತೆಯು ಜಾಗತಿಕ ರಾಜಕೀಯದ ದೃಷ್ಟಿಯಿಂದ ಅತ್ಯಂತ ಕುತೂಹಲ ಕೆರಳಿಸಿದೆ. (ಏಜೆನ್ಸಿಸ್)



