ಟೆಹ್ರಾನ್: ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ, ಟೆಹ್ರಾನ್‌ನ ಕೇಂದ್ರ ಭಾಗದಲ್ಲಿರುವ ಸುಪ್ರೀಂ ಲೀಡರ್ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಮುಖದ ಮೇಲೆ ಭಾರೀ ಗಾಯಗಳಾಗಿ, ಮುಖ ವಿಕೃತವಾಗಿರುವ ಸಾಧ್ಯತೆ ಇದೆ. ಜೊತೆಗೆ, ಅವರ ಕಾಲುಗಳಿಗೆ ಕೂಡ ಗಂಭೀರ ಗಾಯಗಳಾಗಿದೆ ಎಂದು ವರದಿಯಾಗಿದೆ.
ಈ ದಾಳಿ ಫೆಬ್ರವರಿ 28ರಂದು ನಡೆದಿದ್ದು, ಅದೇ ದಾಳಿಯಲ್ಲಿ ಅವರ ತಂದೆ, ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮೊಜಬಾ ಖಾಮೆನೇಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ವರದಿಗಳು ಇದ್ದರೂ, ಅವರ ಆರೋಗ್ಯ ಸ್ಥಿತಿ ಕುರಿತು ಸಂಪೂರ್ಣ ಸ್ಪಷ್ಟತೆ ಇನ್ನೂ ಲಭ್ಯವಾಗಿಲ್ಲ. ಖಮೇನಿ ಒಂದು ಕಾಲು ಕಳೆದುಕೊಂಡಿದ್ದಾರೆಂದು ಅಮೆರಿಕದ ಗುಪ್ತಚರ ಮಾಹಿತಿಯ ಬಗ್ಗೆ ತಿಳಿದಿರುವ ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ. ಖಮೇನಿಯವರ ಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಸಿಐಎ ನಿರಾಕರಿಸಿದ್ದು, ಇಸ್ರೇಲ್ ಪ್ರಧಾನಿ ಕಚೇರಿಯು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರದ ಕಾರಣ ಮೊಜ್ತಾಬಾ ಖಮೇನಿ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚು ಗೊಂದಲಗಳಿವೆ.



