Tuesday, April 21, 2026
Google search engine

Homeರಾಜಕೀಯಆಕ್ಸಿಜನ್ ದುರಂತ ಸಂತ್ರಸ್ತರಿಗೆ ಉದ್ಯೋಗ—ನುಡಿದಂತೆ ನಡೆದು ಸರ್ಕಾರದ ವಿಶ್ವಾಸಾರ್ಹತೆ ಸಾಬೀತು: ಡಿ.ಕೆ. ಶಿವಕುಮಾರ್

ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಉದ್ಯೋಗ—ನುಡಿದಂತೆ ನಡೆದು ಸರ್ಕಾರದ ವಿಶ್ವಾಸಾರ್ಹತೆ ಸಾಬೀತು: ಡಿ.ಕೆ. ಶಿವಕುಮಾರ್

ಗುಂಡ್ಲುಪೇಟೆ: ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸರಕಾರಿ ಉದ್ಯೋಗ ನೀಡುವ ಮೂಲಕ ನಮ್ಮ ಸರಕಾರ ನುಡಿದಂತೆ ನಡೆದಿದೆ. ಆ ಕುಟುಂಬದ ಮಹಿಳೆಯರು ಹಾಗೂ ಮಕ್ಕಳ ಮುಖದಲ್ಲಿ ನಗು ನೋಡಿ ನಮ್ಮ ಬದುಕು ಸಾರ್ಥಕವೆನಿಸಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಜೀವನಕ್ಕಿಂತ ಮಿಗಿಲಾದದ್ದು, ನೆಮ್ಮದಿ, ನೆಮ್ಮದಿಗಿಂತ ಮಿಗಿಲಾದದ್ದು ನಂಬಿಕೆ, ನಂಬಿಕೆಗಿಂತ ಮಿಗಿಲಾದದ್ದು ಆತ್ಮವಿಶ್ವಾಸ, ಆತ್ಮವಿಶ್ವಾಸಕ್ಕಿಂತ ಮಿಗಿಲಾದದ್ದು ನಾವು ನುಡಿದಂತೆ ನಡೆದ ಮಾತು. ನಾನು ಹಾಗೂ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಬಂದು ಬಿಜೆಪಿ ಸರಕಾರದ ಅವಧಿಯಲ್ಲಿ ಇಲ್ಲಿ ನಡೆದ 33 ಮಂದಿಯ ಕೊಲೆ ಪರಿಶೀಲನೆ ಮಾಡಿದೆವು. ಅಂದು ಬಿಜೆಪಿ ಸರಕಾರ ಆಸ್ಪತ್ರೆಯಲ್ಲಿ ಮೃತರು ಕೇವಲ 3 ಮಂದಿ ಎಂದು ಹೇಳಿತ್ತು. ನಾನು, ಸಿದ್ದರಾಮಯ್ಯ ಹಾಗೂ ಧ್ರುವನಾರಾಯಣ್, ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ ಅವರು ಎಲ್ಲರ ಗಮನ ಸೆಳೆದು ಮೃತರ ಕುಟುಂಬಕ್ಕೆ ಭೇಟಿ ಮಾಡಿ ಅವರಿಗೆ ನ್ಯಾಯ ಒದಗಿಸುವ ಮಾತು ಕೊಟ್ಟಿದ್ದೆವು. ನಾವು ನುಡಿದಂತೆ ನಡೆದಿರುವುದು ನಮ್ಮ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್, ಶರಣಪ್ರಕಾಶ್ ಪಾಟೀಲ್ ಹಾಗೂ ಅಧಿಕಾರಿಗಳಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

“ಕೋವಿಡ್ ಸಮಯದಲ್ಲಿ ಲಕ್ಷಾಂತರ ಮಂದಿ ಸತ್ತಿದ್ದಾರೆ. ನಾವು ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯವಾಗದೇ ಇರಬಹುದು. ಆದರೆ ಈ ಜಿಲ್ಲೆಯಲ್ಲಿ ಸತ್ತವರ ಕುಟುಂಬವನ್ನು ಭೇಟಿ ಮಾಡಿ, ಪಕ್ಷದ ವತಿಯಿಂದ ಪರಿಹಾರ ನೀಡಿ, ಅವರಿಗೆ ಆತ್ಮಸ್ಥೈರ್ಯ ತುಂಬಿದೆವು” ಎಂದು ಹೇಳಿದರು.

“ಮುನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ, ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಈ ಕ್ಷೇತ್ರದಲ್ಲಿ ಮಹದೇವ ಪ್ರಸಾದ್ ಅವರು ನಿಮ್ಮ ಹೃದಯ ಗೆದ್ದು ಕೆಲಸ ಮಾಡಿಕೊಂಡು ಬಂದಿದ್ದರು. ಇಂದು ನೀವು ಅವರ ಮಗನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದು, ಅವರು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ” ಎಂದರು.

ಕಾಂಗ್ರೆಸ್ ಸರಕಾರದಿಂದ ಗ್ಯಾರಂಟಿ ಯೋಜನೆ, ಕ್ಷೇತ್ರಕ್ಕೆ 1 ಸಾವಿರ ಕೋಟಿ, 110 ಕೆರೆಗಳಿಗೆ ನೀರು :

“ನಾನು ಚುನಾವಣೆ ಸಂದರ್ಭದಲ್ಲಿ, ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಗುಂಡ್ಲುಪೇಟೆಗೆ ಬಂದಿದ್ದೆ. ಆಗ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ ಎಂದು ಹೇಳಿದ್ದೆ. ಈ ಕೈ ಅಧಿಕಾರದಲ್ಲಿ ಇದ್ದ ಕಾರಣಕ್ಕೆ ಜಿಲ್ಲೆಯ ಈ 25 ಸಂತ್ರಸ್ತ ಕುಟುಂಬ ಸದಸ್ಯರಿಗೆ ಉದ್ಯೋಗ ಸಿಕ್ಕಿದೆ. 500 ಕೋಟಿ ವೆಚ್ಚದಲ್ಲಿ ಈ ಭಾಗದ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಿಕ್ಕಿದೆ. 1 ಸಾವಿರ ಕೋಟಿಗೂ ಹೆಚ್ಚು ಅನುದಾನ ಕ್ಷೇತ್ರದ ಅಭಿವೃದ್ಧಿಗೆ ಬಂದಿದೆ. ಇವುಗಳ ಜತೆಗೆ ಪಂಚ ಗ್ಯಾರಂಟಿ ಯೋಜನೆಗಳು ನಿಮ್ಮನ್ನು ತಲುಪಿವೆ. ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಬಡ ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ ರೂಪಾಯಿ ಹಣ ಬರುತ್ತಿದೆ. ಬಡವರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ. 200 ಯೂನಿಟ್ ವರೆಗೂ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ” ಎಂದು ವಿವರಿಸಿದರು.

10 ದಿನದಲ್ಲಿ ಮೇಕೆದಾಟು ಡಿಪಿಆರ್ ಕೇಂದ್ರಕ್ಕೆ ಸಲ್ಲಿಕೆ :

“ನಮ್ಮ ಸರಕಾರ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದೆ. 1,11,111 ಜನರಿಗೆ ಭೂಮಿ ಪಟ್ಟಾ ದಾಖಲೆ ಉಚಿತವಾಗಿ ನೀಡಿ ಅವರಿಗೆ ಭೂಮಿ ಗ್ಯಾರಂಟಿ ಯೋಜನೆ ನೀಡಿದ್ದೇವೆ. ನಮ್ಮ ಏಳನೇ ಗ್ಯಾರಂಟಿ ಯೋಜನೆಯಾಗಿ ಇಡೀ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ನೀರನ್ನು ಒದಗಿಸುವ ಕಾರ್ಯಕ್ರಮ ನೀಡಲಾಗುತ್ತಿದೆ. ಮೇಕೆದಾಟು ವಿಚಾರವಾಗಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ಕೇಳುತ್ತಿದ್ದವು. ನೀವೆಲ್ಲರೂ ಸೇರಿ ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟದ ಹೆಜ್ಜೆ ಹಾಕಿದಿರಿ. ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಈ ವಿಚಾರವಾಗಿ ನ್ಯಾಯ ಸಿಕ್ಕಿದ್ದು, ಈ ಯೋಜನೆ ವಿಚಾರವಾಗಿ ಅಂತಿಮ ತೀರ್ಮಾನ ಕೇವಲ ಕೇಂದ್ರ ಸರಕಾರ ಮಾಡಬೇಕು ಎಂದು ಹೇಳಿದೆ. ನಾವು ಈಗಾಗಲೇ ಡಿಪಿಆರ್ ತಯಾರಿ ಮಾಡುತ್ತಿದ್ದು, ಮುಂದಿನ ಹತ್ತು ದಿನಗಳಲ್ಲಿ ಈ ಡಿಪಿಆರ್ ಕೇಂದ್ರಕ್ಕೆ ಸಲ್ಲಿಸಲಿದ್ದು, ನಂತರ ಅವರು ಅನುಮತಿ ನೀಡಬೇಕು. ಕೇಂದ್ರದ ಅನುಮತಿ ಸಿಕ್ಕ ನಂತರ ಯೋಜನೆ ಜಾರಿ ಮಾಡಲಾಗುವುದು. ಈಗಾಗಲೇ ಯೋಜನೆ ಜಾರಿಗೆ ಕಚೇರಿ ಆರಂಭಿಸಿದ್ದು, ಅಗತ್ಯ ಭೂಮಿಯನ್ನು ಗುರುತಿಸಿದ್ದೇವೆ” ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular