ಕೆ.ಆರ್.ನಗರ : 2025-26ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್‌ಸಿ ಪರೀಕ್ಷೆ ಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳು ಶೇ.92.13 ಪಡೆಯುವುದರಲ್ಲಿ ಜಿಲ್ಲೆಯಲ್ಲಿ 8 ನೇ ಸ್ಥಾನ ಪಡೆದಿದ್ದು ಕಳೆದ ಸಾಲಿಗಿಂತ ಈ ಸಾರಿ ಎರಡು ಸ್ಥಾನ ಕೆಳಕ್ಕೆ ದೂಡಲ್ಪಟ್ಟಿದೆ.
ಪರೀಕ್ಷೆಗೆ ಹಾಜರಾಗಿರುವ 2658 ವಿದ್ಯಾರ್ಥಿಗಳ ಪೈಕಿ 2449 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಆ ಪೈಕಿ 31 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಗಳಿಸಿರುವುದರ ಜತೆಗೆ 151 ಡಿಸ್ಟಿಂಗ್ ಷನ್ ಅಲ್ಲಿ ಪಾಸಾಗಿದ್ದಾರೆ.
ಪರೀಕ್ಷೆ ಎದುರಿಸಿದ 1280 ವಿದ್ಯಾರ್ಥಿಗಳಲ್ಲಿ 1128 ಮಂದಿ ಉತ್ತೀರ್ಣರಾಗುವ ಮೂಲಕ ಶೇಕಡಾ 88 ಫಲಿತಾಂಶ ಪಡೆದಿದ್ದು 1178 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಅವರಲ್ಲಿ 1321 ಮಂದಿ ಉತ್ತೀರ್ಣರಾಗಿ ಶೇಕಡಾ 95.86 ಫಲಿತಾಂಶ ಪಡೆಯುವುದರ ಮೂಲಕ ವಿದ್ಯಾರ್ಥಿನಿಯರೇ ಮೇಲು ಗೈ ಸಾಧಿಸಿದ್ದಾರೆ.
41 ಸರ್ಕಾರಿ ಶಾಲೆಗಳ 1521 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 1382 ತೇರ್ಗಡೆಯಾಗಿ ಶೇಕಡಾ 90.50 ಫಲಿತಾಂಶ ಪಡೆದಿದ್ದು ಅನುದಾನಿತ 13 ಶಾಲೆಯ 350 ವಿದ್ಯಾರ್ಥಿಗಳಲ್ಲಿ 311 ಪಾಸಾಗಿದ್ದು ಶೇಕಡಾ 88.85 ಫಲಿತಾಂಶ ಹಾಗೂ ಅನುದಾನ ರಹಿತ 18 ಶಾಲೆಗಳಲ್ಲಿನ 781 ವಿದ್ಯಾರ್ಥಿಗಳಲ್ಲಿ 756 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇಕಡಾ 96.79 ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 2658 ವಿದ್ಯಾರ್ಥಿಗಳು ತಮ್ಮ ಪ್ರಥಮ ಭಾಷೆಯಾಗಿದ್ದ ಕನ್ನಡದಲ್ಲಿ 2449 ಮಂದಿ ಅತಿಹೆಚ್ಚು ಅಂಕ ಪಡೆದಿದ್ದು, ದ್ವಿತೀಯ ಭಾಷೆ ಇಂಗ್ಲಿಷ್ ಗೆ ಹಾಜರಾಗಿದ್ದ 2561 ವಿದ್ಯಾರ್ಥಿಗಳ ಪೈಕಿ 2361 ಮಂದಿ, ತೃತೀಯ ಭಾಷೆ ಹಿಂದೆ ಪರೀಕ್ಷೆ ಎದುರಿಸಿದ್ದ 2561 ವಿದ್ಯಾರ್ಥಿಗಳಲ್ಲಿ 2449, ಗಣಿತ ವಿಷಯ ಬರೆದಿದ್ದ 2658 ವಿದ್ಯಾರ್ಥಿಗಳಲ್ಲಿ 2449 ಮಂದಿ ತೇರ್ಗಡೆಯಾಗಿದ್ದಾರಲ್ಲದೆ, ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದ 2658 ವಿದ್ಯಾರ್ಥಿಗಳ ಪೈಕಿ 2428 ಮತ್ತು ಸಮಾಜ ವಿಜ್ಞಾನ ಪರೀಕ್ಷೆ ಬರೆದಿದ್ದ 2658 ವಿದ್ಯಾರ್ಥಿಗಳಲ್ಲಿ 2449 ಮಂದಿ ಅತಿ ಹೆಚ್ಚು ಅಂಕ ಗಳಿಸಿದ ಖ್ಯಾತಿ ಪಡೆದುಕೊಂಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೇಳಿಕೆ
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಿಗೆ 2025-26ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ಸ್ಥಾನ ಕುಸಿತವಾಗಿದ್ದರೂ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಮೂಲಕ ನಾವು ಸಾಧನೆಯಲ್ಲಿ ಮೇಲುಗೈ ಸಾಧಿಸಿದ್ದೇವೆ. ಪಟ್ಟಣದ ತಮ್ಮ ಆಡಳಿತ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಮಾಹಿತಿ ನೀಡಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆಗೆ ಕುಳಿತಿದ 2686 ವಿದ್ಯಾರ್ಥಿಗಳಲ್ಲಿ 1805 ಮಂದಿ ಉತ್ತೀರ್ಣರಾಗಿ ಶೇಕಡಾ 67.20 ಫಲಿತಾಂಶ ಪಡೆದುಕೊಂಡಿದೆವು ಎಂದು ತಿಳಿಸಿದರು.
ಎರಡು ತಾಲೂಕುಗಳಿಗೆ ಜಿಲ್ಲಾವಾರು ಫಲಿತಾಂಶದಲ್ಲಿ ಹಿನ್ನಡೆಯಾಗಿದೆ ಆದರೆ 2024-25ನೇ ಸಾಲಿನಲ್ಲಿ 3 ಶಾಲೆಗಳು 100 ಫಲಿತಾಂಶ ಪಡೆದುಕೊಂಡಿದ್ದೆವು ಆದರೆ ಈ ಬಾರಿ ಅವುಗಳ ಸಂಖ್ಯೆ 15ಕ್ಕೇರಿದ್ದು ಇದು ಶಾಸಕರ ಮಾರ್ಗದರ್ಶನ ಶಿಕ್ಷಕರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಬಿ.ಎಸ್.ಮಾದಪ್ಪ ಶಾಲೆಯ ಸಾಧನೆ
ಕಳೆದ 16 ವರ್ಷಗಳಿಂದ ಸತತವಾಗಿ ಶೇಕಡಾ 100 ಫಲಿತಾಂಶ ಪಡೆಯುತ್ತಿರುವ ಪಟ್ಟಣದ ಬಿ.ಎಸ್.ಮಾದಪ್ಪ ಪ್ರೌಢ ಶಾಲೆಯ ವಿದ್ಯಾರ್ಥಿನಿ ಬಿ.ಕೆ.ವಿನುತಾ 625 ಕ್ಕೆ 623 ಅಂಕ ಪಡೆಯುವ ಮೂಲಕ ಜಿಲ್ಲೆಗೆ 2 ನೇ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾಳೆ.
ಶಾಲೆಯ ವಿದ್ಯಾರ್ಥಿನಿಯ ಸಾಧನೆಯನ್ನು ಶಾಸಕ ಡಿ.ರವಿಶಂಕರ್, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಂ.ಶಿವಪ್ರಸಾದ್, ಮುಖ್ಯಶಿಕ್ಷಕ ಗಣೇಶ್ ಪ್ರಸಾದ್ ಮತ್ತು ಶಿಕ್ಷಕಿ ಎಂ.ವಿನುತಾ ಪ್ರಶಂಸಿಸಿದ್ದಾರೆ.



