ಹೊಳೆನರಸೀಪುರ : ಕೇವಲ 2 ಸಾವಿರ ರೂಪಾಯಿ ಗ್ಯಾರಂಟಿ ಹಣದಿಂದ ಸಾಮಾನ್ಯ ಜನರು, ಬಡವರ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಈ ಸಣ್ಣ ಮೊತ್ತಕ್ಕೆ ಮರುಳಾಗಬಾರದು. ಇಂತಹ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರಗಳಿಗೆ ಸಂಬಳ ಕೊಡಲಾಗದಂತ ದುಸ್ಥಿತಿ ಎದುರಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇವಲ ಎರಡು ಸಾವಿರ ರೂಪಾಯಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅದರಿಂದ ಆರೋಗ್ಯ, ಶಿಕ್ಷಣ ಸೇರಿದಂತೆ ಕುಟುಂಬಗಳ ಯಾವ ಅಗತ್ಯವು ಪೂರೈಕೆ ಆಗುವುದಿಲ್ಲ. ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಜನರಿಗೆ ಈ ಎರಡು ಸಾವಿರ ರೂಪಾಯಿಯಿಂದ ಚಿಕಿತ್ಸೆ ಪಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇನ್ನು ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ನಿಮ್ಮ ತಲೆಯ ಮೇಲೆ ಹೊರೆ ಹೊರೆಸಿ 2000 ಗ್ಯಾರಂಟಿ ಕೊಡುತ್ತಿದೆ. ದಿನ ಬೆಳಗ್ಗೆ ಬೆಲೆ ಏರಿಕೆ ಮಾಡಿ ತೆರಿಗೆ ಏರಿಸಿದರೆ 2000 ಏನು ಬಂತು, ನಾನಾದರೆ 5000 ಕೊಡುತ್ತಿದ್ದೆ. ನಿಮಗೆ ಗ್ಯಾರಂಟಿ ಬೇಕಾದರೆ ನಾನೇ 5 ಸಾವಿರ ರೂಪಾಯಿ ಕೊಡುತ್ತೇನೆ ಎಂದರು. ಒಮ್ಮೆ ನನ್ನ ಕೈಗೆ ಸರ್ಕಾರ ಕೊಡಿ, ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಿ ತೋರಿಸುತ್ತೇನೆ, ನಾನು ಸಿಎಂ ಆದರೆ 5000 ಕೊಡುತ್ತೇನೆ ಎಂದರು.
ಅಲ್ಲದೆ ರಾಜ್ಯದಲ್ಲಿ ಮಾರ್ಚ್ ತಿಂಗಳ ಸರ್ಕಾರಿ ನೌಕರರ ವೇತನವನ್ನು ಇನ್ನೂ ಕೊಟ್ಟಿಲ್ಲ ಎನ್ನುವ ಮಾಹಿತಿಯು ಇದೆ. ಹಾಗೆಯೇ ಕಾಂಗ್ರೆಸ್ ಆಡಳಿತ ಇರುವ ಹಿಮಾಚಲ ಪ್ರದೇಶದಲ್ಲಿಯೂ ಸರ್ಕಾರಿ ನೌಕರರ ಸಂಬಳವನ್ನು ನೀಡಲು ಪರದಾಡುತ್ತಿದ್ದು, ಆ ಸರ್ಕಾರವು ನೌಕರರ ಸಂಬಳವನ್ನು ಕಡಿತ ಮಾಡಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ರಾಜ್ಯಗಳ ಅಭಿವೃದ್ಧಿ ಸಂಪೂರ್ಣವಾಗಿ ಹಳಿತಪ್ಪಿದೆ, ಇದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಒಂದು ಕೈಯಲ್ಲಿ ನಿಮಗೆ 2000 ಕೊಡುತ್ತಾರೆ. ಇನ್ನೊಂದು ಕೈಯಲ್ಲಿ ತೆರಿಗೆ ಮೇಲೆ ತೆರಿಗೆ ವಿಧಿಸುತ್ತಾರೆ. ಬೆಲೆ ಏರಿಕೆಗಳ ಬಗ್ಗೆ ಹೇಳುವ ಹಾಗೆಯೇ ಇಲ್ಲ. ಇತ್ತೀಚೆಗೆ ವಿದ್ಯುತ್ ದರವನ್ನು ಹೆಚ್ಚಿಸಿದರು. ಹಾಗೆಯೇ ಮದ್ಯದ ದರವನ್ನು ಏರಿಸಿದರು. ಎಷ್ಟು ಸಾಧ್ಯವೊ ಅಷ್ಟು ಕಡೆ ಜನರನ್ನು ಕಿತ್ತು ತಿನ್ನುವ ಕೆಲಸವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಚಿವರು ಕಿಡಿಕಾರಿದರು.
ಚುನಾವಣೆ ಬಂದಾಗ ನಿಮ್ಮ ಭವಿಷ್ಯ ಮತ್ತು ನಿಮ್ಮ ಮಕ್ಕಳ ಉದ್ಧಾರಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ನೋಡಿ ಆಯ್ಕೆ ಮಾಡಿ. ಜಾತಿ ನೋಡಿ ಮತ ಹಾಕಬೇಡಿ. ಹಾಸನ ಜಿಲ್ಲೆ ಸೇರಿ ಇಡೀ ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ವಿದ್ಯುತ್ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿಯನ್ನು ಗಮನಿಸಿ. ನನಗೆ ದೊರೆತ ಸಣ್ಣ ಅವಧಿಯಲ್ಲಿ ಇಷ್ಟೆಲ್ಲ ಕೆಲಸಗಳನ್ನು ಮಾಡಿದ್ದೇನೆ. ಸಾವಿರಾರು ಶಿಕ್ಷಕರನ್ನು ನೇರವಾಗಿ ಮತ್ತು ಪಾರದರ್ಶಕವಾಗಿ ನೇಮಕ ಮಾಡಿದ್ದೆ. ಆದರೆ ಈಗಿನ ಸರ್ಕಾರಕ್ಕೆ ಒಂದೇ ಒಂದು ನೇಮಕಾತಿ ಮಾಡುವ ಶಕ್ತಿಯು ಇಲ್ಲವಾಗಿದೆ ಎಂದು ಕೇಂದ್ರ ಸಚಿವರು ದೂರಿದರು.



