ಹೊಳೆನರಸೀಪುರ : ನನ್ನ ಅಣ್ಣ ಹೆಚ್.ಡಿ.ರೇವಣ್ಣ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ, ಅದೆಷ್ಟು ದೇವಸ್ಥಾನ ಕಟ್ಟಿದ್ದಾರೋ, ಇಡೀ ಹೊಳೆನರಸೀಪುರ ಹಾಸನ ಜಿಲ್ಲೆಯೊಳಗೆ ಸಾಕಷ್ಟು ದೇವಸ್ಥಾನ ಕಟ್ಟಿದ್ದಾರೆ, ದೇವರ ಮೇಲೆ ಅವನಿಗೆ ಅತೀವ ನಂಬಿಕೆ ಎಂದು ಸಹೋದರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ರೇವಣ್ಣ ಅವರು ದೇವಸ್ಥಾನಕ್ಕೆ ಹೋಗಿ ದೇವರ ಪ್ರಸಾದ ತೆಗೆದುಕೊಳ್ಳುವವರೆಗೆ ಕಾಲಿಗೆ ಚಪ್ಪಲಿನೂ ಹಾಕಲ್ಲ, ಚಪ್ಪಲಿ ಹಾಕದೆ ಸಾಕಷ್ಟು ಬಾರಿ ವಿಧಾನ ಸೌಧಕ್ಕೂ ಹೋಗಿದ್ದಾರೆ. ಅಷ್ಟು ದೇವರ ಮೇಲೆ ಭಕ್ತಿ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು, ದೇವರು ಅವರಿಗೆ ಸ್ವಲ್ಪ ಕೋಪ ಕೊಟ್ಟುಬಿಟ್ಟ, ಜನರ ಜೊತೆ ಸ್ವಲ್ಪ ಶಾಂತ ರೀತಿಯಲ್ಲಿ ವರ್ತಿಸುತ್ತಿದ್ದರೆ ಇನ್ನೂ ಎತ್ತರಕ್ಕೆ ಜನರು ತೆಗೆದುಕೊಂಡು ಹೋಗುತ್ತಿದ್ದರು. ಅದೊಂದನ್ನು ಸ್ವಲ್ಪ ಬದಲಾವಣೆ ಮಾಡಿಕೊ ಅಂತೀನಿ, ಅವರು ಮಾಡಿಕೊಳ್ಳಲ್ಲ ಎಂದು ಅಣ್ಣನ ಬಗ್ಗೆ ಗುಣಗಾನ ಮಾಡಿದರು.
ಇನ್ನು ರೇವಣ್ಣ ಹೊರಗೆ ಜನರ ಜೊತೆ ಸ್ವಲ್ಪ ರೇಗೋದು ಸ್ವಲ್ಪ ಬೇಸರವಾಗಬಹುದು, ಆದರೆ ಅವನು ಹೃದಯದಲ್ಲಿ ಶುದ್ಧವಾಗಿದ್ದಾನೆ. ಈ ರಾಜ್ಯ ಮತ್ತು ಹಾಸನ ಜಿಲ್ಲೆಯ ಅಭಿವೃದ್ಧಿಗೆ ದೇವೇಗೌಡರ ಕನಸನ್ನು ನನಸು ಮಾಡುವ ದಿನ ದೂರವಿಲ್ಲ. ಈ ಜಿಲ್ಲೆಯ ಬಗ್ಗೆ ನಮ್ಮ ಬಗ್ಗೆ ವಿಶ್ವಾಸ ಇಡಿ ಎಂದು ಜನತೆಯನ್ನು ಕೇಳಿಕೊಂಡರು.



