ಬೆಂಗಳೂರು: ಬೇಸಿಗೆ ರಜೆಯ ಮೋಜಿನಲ್ಲಿ ಪ್ರವಾಸಕ್ಕೆ ಹೊರಡುವ ಮುನ್ನ ಪ್ರವಾಸಿಗರು ಜಾಗರೂಕರಾಗಿರುವುದು ಮುಖ್ಯ. ರಾಜ್ಯದ ಕೆಲವು ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಂಭವಿಸಿದ ಸರಣಿ ಅಪಘಾತದ ಹಿನ್ನೆಲೆಯಲ್ಲಿ ಅಂತಗಹ ಸ್ಥಳಗಳನ್ನ ಸರ್ಕಾರ ಮತ್ತು ಜಿಲ್ಲಾಡಳಿತಗಳು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿವೆ.ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬದಲು ಪ್ರವಾಸಿ ತಾಣಗಳಿಗೇ ಬೀಗ ಹಾಕಿರುವುದು ಪ್ರವಾಸಿಗರಲ್ಲಿ ಅಸಮಧಾನ ಮೂಡಿಸಿದೆ.
ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಬಲಮುರಿ ಮತ್ತು ಎಡಮುರಿ ಫಾಲ್ಸ್‌ನಲ್ಲಿ ಈಜಲು ಹೋದ ನಾಲ್ವರು ಪ್ರವಾಸಿಗರು ಈ ವರ್ಷ ಜಲಸಮಾಧಿಯಾಗಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ, ನೀರಿನ ಏರಿಳಿತದ ಹಂಗಿಲ್ಲದೆ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದರು ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಪ್ರವಾಸಿ ಸ್ಥಳಕ್ಕೆ ನಿರ್ಬಂಧ ಹೇರಿದೆ.
ಇದೇ ರೀತಿ ಮತ್ತೊಂದು ಪ್ರವಾಸಿ ತಾಣವಾದ ತಲಕಾಡಿನ ಕಾವೇರಿ ನದಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದರು ಅಲ್ಲಿಯೂ ನಿರ್ಬಂಧ ಹೇರಲಾಗಿತ್ತು. ಆದರೆ ಪ್ರವಾಸಿಗರ ತೀವ್ರ ವಿರೋಧದ ಬಳಿಕ ಅಧಿಕಾರಿಗಳು ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ.
ಕನಕಪುರದ ಪ್ರಸಿದ್ಧ ಸಂಗಮ ಮತ್ತು ಮೇಕೆದಾಟು ಭಾಗದಲ್ಲಿ ವಾರದ ಹಿಂದೆ ಕಾಡಾನೆಯೊಂದು ಪ್ರವಾಸಿಗರ ಮೇಲೆ ದಾಳಿ ಮಾಡಿತ್ತು. ಪ್ರವಾಸಿಗರನ್ನು ಅಟ್ಟಾಡಿಸಿದ ಆನೆ ಒಬ್ಬ ಮಹಿಳೆಯನ್ನು ಗಾಯಗೊಳಿಸಿ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಕಾವೇರಿ ವನ್ಯಜೀವಿಧಾಮದ ಎಸಿಎಫ್ ನಾಗೇಂದ್ರ ಪ್ರಸಾದ್ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ವಾರಗಳ ಕಾಲ ಇಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ ಹೇರಿದ್ದಾರೆ.
ಚಿಕ್ಕಮಗಳೂರಿನ ಮಾಣಿಕ್ಯಧಾರಾದಲ್ಲಿ ಕೇರಳ ಮೂಲದ ಬಾಲಕಿ ಸಾವನ್ನಪ್ಪಿದ್ದ ಘಟನೆಯ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮತ್ತು ಮಾಣಿಕ್ಯಧಾರಾದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಚಾಲನೆ ನೀಡಲಾಗಿದೆ. ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಮತ್ತು ಅಪಾಯಗಳನ್ನು ತಡೆಯಲು ಪ್ರವಾಸಿ ಮಿತ್ರ ಎಂಬ ಮಾರ್ಗದರ್ಶಕರನ್ನು ನೇಮಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇದು ಪ್ರವಾಸಿಗರಿಗೆ ನಿರ್ಬಂಧ ಹೇರುವ ಬದಲು ಸುರಕ್ಷತೆ ಒದಗಿಸುವ ಮಾದರಿ ನಿರ್ಧಾರವೆಂದು ಮೆಚ್ಚುಗೆ ಗಳಿಸಿದೆ.
ಸಮಸ್ಯೆ ಎದುರಾದಾಗ ಪ್ರವಾಸಿ ತಾಣಗಳನ್ನೇ ಮುಚ್ಚುವುದು ಪರಿಹಾರವಲ್ಲ ಎಂದು ಜನರು ಮತ್ತು ಅಲ್ಲಿನ ವ್ಯಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ರಕ್ಷಣಾ ಸಿಬ್ಬಂದಿ, ಲೈಫ್ ಗಾರ್ಡ್‌ಗಳು ಮತ್ತು ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಅದನ್ನು ಬಿಟ್ಟು ನಿರ್ಬಂಧ ಹೇರುವುದು ಪ್ರವಾಸೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.



