Thursday, April 30, 2026
Google search engine

Homeದೇಶಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ : ಭಾರತ-ಇರಾನ್ ವಿದೇಶಾಂಗ ಸಚಿವರ ಮಹತ್ವದ ಮಾತುಕತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ : ಭಾರತ-ಇರಾನ್ ವಿದೇಶಾಂಗ ಸಚಿವರ ಮಹತ್ವದ ಮಾತುಕತೆ

ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಬುಧವಾರ ಸಂಜೆ ದೂರವಾಣಿ ಮೂಲಕ ಮಹತ್ವದ ಚರ್ಚೆ ನಡೆಸಿದರು. ಪ್ರಚಲಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳ ಕುರಿತು ಇಬ್ಬರೂ ನಾಯಕರು ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದು, ನಿರಂತರ ಸಂಪರ್ಕದಲ್ಲಿರಲು ಒಪ್ಪಿಗೆ ಸೂಚಿಸಿದ್ದಾರೆ.

ಸಚಿವ ಜೈಶಂಕರ್ ಅವರು ಈ ಕುರಿತು ‘ಎಕ್ಸ್’ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪ್ರಸ್ತುತ ಸನ್ನಿವೇಶದ ವಿವಿಧ ಆಯಾಮಗಳ ಬಗ್ಗೆ ಚರ್ಚಿಸಲಾಗಿದೆ ಮತ್ತು ಉಭಯ ರಾಷ್ಟ್ರಗಳ ನಡುವೆ ನಿರಂತರ ಸಂವಾದದ ಅಗತ್ಯವನ್ನು ಒತ್ತಿಹೇಳಲಾಗಿದೆ ಎಂದು ತಿಳಿಸಿದ್ದಾರೆ.

ಇರಾನ್‌ ನ ಸಕ್ರಿಯ ರಾಜತಾಂತ್ರಿಕತೆ: ಅರಾಘ್ಚಿ ಅವರು ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ, ಒಮನ್ ಮತ್ತು ರಷ್ಯಾ ಪ್ರವಾಸ ಕೈಗೊಂಡಿದ್ದು, ಹಾರ್ಮುಜ್ ಜಲಸಂಧಿಯ ಉದ್ವಿಗ್ನತೆ ಸೇರಿದಂತೆ ಪ್ರಾದೇಶಿಕ ಭದ್ರತೆಯ ಬಗ್ಗೆ ಚರ್ಚಿಸುತ್ತಿದ್ದಾರೆ.

ಒಮನ್‌ನಲ್ಲಿ ಪ್ರಾದೇಶಿಕ ಸ್ಥಿರತೆಗೆ ಒತ್ತು: ಒಮನ್ ಭೇಟಿಯ ವೇಳೆ ಅರಾಘ್ಚಿ ಅಲ್ಲಿನ ಸುಲ್ತಾನ್ ಮತ್ತು ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ್ದರು. ಸುರಕ್ಷಿತ ಕಡಲ ಸಾರಿಗೆ ಮತ್ತು ಪ್ರಾದೇಶಿಕ ಸಹಕಾರವು ನೆರೆಹೊರೆಯ ರಾಷ್ಟ್ರಗಳಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಪ್ರಯೋಜನಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ ಭೇಟಿ ಮತ್ತು ಪುಟಿನ್ ಬೆಂಬಲ

ತಮ್ಮ ಪ್ರವಾಸದ ಕೊನೆಯ ಹಂತದಲ್ಲಿ ಅರಾಘ್ಚಿ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧಗಳು ಹಾಗೂ ಅಮೆರಿಕ ಮತ್ತು ಇಸ್ರೇಲ್ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಶಾಂತಿ ಸ್ಥಾಪನೆಗಾಗಿ ರಷ್ಯಾ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಮತ್ತು ಇರಾನ್ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದಾಗಿ ಪುಟಿನ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular