ಚಾಮರಾಜನಗರ: ತಮ್ಮ ಕೈ ಚಳಕದಿಂದ ಕಣ್ಮನ ಸೆಳೆಯುವ ಹೊಸ ಹೊಸ ಸಂವೇದನಾಶೀಲ ಚಿತ್ರಾಕೃತಿಗಳನ್ನು ರಚಿಸುವ ಪ್ರತಿಭಾವಂತ ಚಿತ್ರ ಕಲಾವಿದ ಜಿಲ್ಲೆಯ ಕಣ್ಣೂರು ಮಂಗಲದ ಹೆಚ್. ಮಹದೇವು ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ಬಣ್ಣಿಸಿದರು.
ರಂಗತರಂಗ ಟ್ರಸ್ಟ್ ಮತ್ತು ಜನ ಹಿತಾಸಕ್ತಿ ಹೋರಾಟ ವೇದಿಕೆಯು ಏರ್ಪಡಿಸಿದ್ದ ಲಲಿತಾ ಕಲಾ ಅಕಾಡೆಮಿ ಕೊಡಮಾಡುವ “ವರ್ಣಶ್ರೀ” ಪ್ರಶಸ್ತಿಗೆ ಭಾಜನರಾದ ಕಲಾವಿದ ಮಹದೇವು ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಲಾವಿದರು ಸೂಕ್ಷ್ಮ ಸಂವೇದನೆ, ಕೌಶಲ್ಯ ಯುಕ್ತ ಕೈಚಳಕ ಮತ್ತು ವಿಶಿಷ್ಟ ಬಗೆಯ ದೃಷ್ಠಿಕೋನ ಕರಗತ ಮಾಡಿಕೊಂಡಾಗಲೆ ಉತ್ತಮ ಚಿತ್ರಾಕೃತಿ ಮೂಡಿಬರುತ್ತದೆ. ಮಹದೇವು ಅವರು ಮೈಸೂರು ದಸರಾ ಜಂಬೂಸವಾರಿಗೆ ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯ ದಸರಾ ಸ್ತಬ್ಧ ಚಿತ್ರಗಳನ್ನು ವಿನ್ಯಾಸಗೊಳಿಸಿ 5 ಬಾರಿ ಪ್ರಥಮ ಸ್ಥಾನ ತಂದು ಕೊಟ್ಟಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗಾಗಿ ಅಂಬೇಡ್ಕರ್ ಪ್ರತಿಮೆ ಮಾಡಿ ಕೊಟ್ಟಿದ್ದಾರೆ. ರಾಷ್ಟ್ರೀಯ ವರ್ಣಸಿರಿ ಪ್ರಶಸ್ತಿ, ಚಾಮರಾಜನಗರ ಜಿಲ್ಲಾಡಳಿತದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳು ಇವರನ್ನು ಹರಸಿ ಬಂದಿವೆ ಎಂದರು.
ಜನ ಹಿತಾಸಕ್ತಿ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಮಾತನಾಡಿ, ದಿನದ ಹೆಚ್ಚು ಸಮಯವನ್ನು ಬಣ್ಣದೊಂದಿಗೆ ಕಳೆಯುವ ಮಹದೇವು ನಮ್ಮ ಜಿಲ್ಲೆಯ ಹೆಮ್ಮೆಯ ಕಲಾವಿದರು. ಅವರು ರಚಿಸಿದ ಕಲಾಕೃತಿಗಳು ಬಹು ಬೇಡಿಕೆಯ, ಅರ್ಥವಂತಿಕೆಯ ಮೌಲಿಕ ಚಿತ್ರಶಿಲ್ಪಗಳು. ಅವರಿಗೆ ಇನ್ನೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳು ಸಂದಾಯವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಶ್ರೀನಿವಾಸಮೂರ್ತಿ, ದಸಂಸ ಜಿಲ್ಲಾ ಸಂಯೋಜಕ ಕೆರೆಹಳ್ಳಿ ಬಸವರಾಜು , ಪರಶಿವಮೂರ್ತಿ, ಇದಾಯತ್ ಷರೀಫ್, ಮಾರುತಿ ಉಪಸ್ಥಿತರಿದ್ದರು.



