ಪಿರಿಯಾಪಟ್ಟಣ : ಭವಿಷ್ಯದ ಭಾರತ ನಿರ್ಮಾಣ ಚಿಂತನೆಯೊಂದಿಗೆ ಸಮಾಜದಲ್ಲಿ ಹಿಂದುಳಿದವರ ಪರ ಹೋರಾಟ ನಡೆಸಿದ ಮಹಾನ್ ನಾಯಕರು ಡಾ.ಬಾಬು ಜಗಜೀವನ ರಾಮ್ ಅವರು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಮಾದರ ಮಹಾಸಭಾ ಮತ್ತು ಮಾದಿಗ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆದ ಡಾ.ಬಾಬು ಜಗಜೀವನ ರಾಮ್ ಅವರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರು ಈ ದೇಶ ಕಂಡ ಮಹಾನ್ ನಾಯಕರುಗಳು, ಡಾ.ಬಿ.ಆರ್ ಅಂಬೇಡ್ಕರ್ ಅವರು ಈ ದೇಶಕ್ಕೆ ಸರ್ವ ಶ್ರೇಷ್ಠ ಸಂವಿಧಾನ ರಚಿಸಿ ಕಾನೂನಿನ ಮೂಲಕ ಎಲ್ಲರಿಗೂ ಸಮಾನ ಹಕ್ಕು ನೀಡಿದರು ಅದೇ ರೀತಿ ಡಾ.ಬಾಬು ಜಗಜೀವನ ರಾಮ್ ಅವರು ದೇಶಕ್ಕೆ ಅನ್ನ ನೀಡಿದ ಗಣ್ಯ ವ್ಯಕ್ತಿಯಾಗಿ ಹಸಿರು ಕ್ರಾಂತಿಯ ಹರಿಕಾರ ಎಂದು ಪ್ರಸಿದ್ಧರಾದರು, ಇವರಿಬ್ಬರು ಮಹನೀಯರು ಎರಡು ಕಣ್ಣುಗಳಂತೆ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬಾಬೂಜೀ ಅವರು ಉಪ ಪ್ರಧಾನಿಯಾಗಿ ಜತೆಗೆ ಹಲವು ಖಾತೆಗಳ ಸಚಿವರಾಗಿ ಶೋಷಿತರ ಪರ ಅನೇಕ ಹೋರಾಟ ಮಾಡಿದ್ದಾರೆ ಅವರ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರು ಮಾತನಾಡಿ ಬಾಬು ಜಗಜೀವನ ರಾಮ್ ಅವರು ದೇಶದ ಆರ್ಥಿಕತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಬಡವರಿಗೆ ಬದುಕು ಕೊಟ್ಟ ಅಗ್ರ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರು, ಹಸಿರು ಕ್ರಾಂತಿ ಮೂಲಕ ನಾಡಿಗೆ ಅನ್ನ ನೀಡಿ ರೈತರ ಬಾಳು ಹಸನು ಮಾಡಿದರು, ಉಪ ಪ್ರಧಾನಿಯಾಗಿದ್ದ ವೇಳೆ ದೇಶದ ಬೆಳವಣಿಗೆಗೆ ಇವರ ಕೊಡುಗೆ ಅಪಾರ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ಡಾ.ಬಿ.ಜೆ ವಿಜಯ್ ಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್, ಸಾಹಿತಿ ಕೆ.ಆರ್ ರಾಚಯ್ಯ, ಮೈಲಾಕ್ ಅಧ್ಯಕ್ಷರಾದ ಹೆಚ್.ಡಿ ಗಣೇಶ್, ಮೈಸೂರು ಮಾಜಿ ಮೇಯರ್ ನಾರಾಯಣ, ಕರ್ನಾಟಕ ಮಾದರ ಮಹಾಸಭಾ ಮತ್ತು ಆದಿ ಜಾಂಬವ ಮಾದಿಗ ಸಂಘಟನೆಯ ಸೀಗೂರು ವಿಜಯ್ ಕುಮಾರ್, ರಹಮತ್ ಜಾನ್ ಬಾಬು, ಭೂತನಹಳ್ಳಿ ಶಿವಣ್ಣ, ಡಿ.ಕುಮಾರ್, ಆದಿಶೇಷ, ಸಣ್ಣಪ್ಪ, ಆನಂದ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.



