ತುಮಕೂರು: ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ನವಿಲುಗಳ ಸರಣಿ ಸಾವು ವರದಿಯಾಗಿದ್ದವು. ಇದೀಗ ಅದೇ ಮಾದರಿಯಲ್ಲಿ ಕೋಳಿಗಳ ಸಾವೂ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಸಾವನ್ನಪ್ಪಿದ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ಪರಿಶೀಲನೆ ನಡೆಸಲಾಗುತ್ತಿದೆ. ಹಕ್ಕಿ ಜ್ವರವೇ 44 ನವಿಲುಗಳ ಸಾವಿಗೆ ಕಾರಣ ಎಂದು ಈಗಾಗಲೇ ದೃಢಪಟ್ಟಿದ್ದು, ಈಗ ಕೋಳಿಗಳ ಸಾವಿಗೂ ಅದೇ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕಳೆದ ಏಪ್ರಿಲ್ 16ರಿಂದ ತುಮಕೂರು ತಾಲೂಕಿನಾದ್ಯಂತ ನವಿಲುಗಳ ಸರಣಿ ಸಾವು ಆರಂಭವಾಗಿತ್ತು. ಕೇವಲ 11 ದಿನಗಳಲ್ಲಿ ಬರೋಬ್ಬರಿ 44 ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ಜಿಲ್ಲೆಯಲ್ಲಿ ತಾಪಮಾನ ಏರುತ್ತಿದ್ದ ಕಾರಣ, ಅತಿಯಾದ ಶಾಖ ಮತ್ತು ನಿರ್ಜಲೀಕರಣದಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು. ಆದರೆ ನಂತರ ಬಂದ FSL ವರದಿಯಲ್ಲಿ ಹಕ್ಕಿ ಜ್ವರದ ಸೋಂಕಿನಿಂದಲೇ ನವಿಲುಗಳು ಸಾವನ್ನಪ್ಪಿವೆ ಎಂದು ದೃಢಪಟ್ಟಿದೆ. ಇದೀಗ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ಏಕಾಕಾಲದಲ್ಲಿ ಸುಮಾರು 30 ಕೋಳಿಗಳು ಸಾವನ್ನಪ್ಪಿದ್ದು, ಈ ಘಟನೆ ಹಕ್ಕಿಜ್ವರದ ಅನುಮಾನಕ್ಕೆ ಕಾರಣವಾಗಿದೆ. ಪಶು ಸಂಗೋಪನಾ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕಲ್ಲಳ್ಳಿ, ಕೋಡಿಹಳ್ಳಿ, ಹುಣ್ಣೆನಹಳ್ಳಿ, ಬೊಮ್ಮನಹಳ್ಳಿ ಮತ್ತು ಬೈರಸಂದ್ರ ಪ್ರದೇಶದ ಜನರು ಹೆಚ್ಚು ಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ. ಯಾವುದೇ ಕೋಳಿಯ ಸಾವು ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಜನರು ಅನಗತ್ಯ ಆತಂಕಪಡಬೇಕಾಗಿಲ್ಲ, ಆದರೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



